ಸಜ್ಜನ ರಾಜಕಾರಣಿ, ಸಾಂಸ್ಕೃತಿಕ ರಾಯಭಾರಿ ಎಂ.ಪಿ.ಪ್ರಕಾಶ್; ಸಾಹಿತಿ ಕುಂ.ವೀರಭದ್ರಪ್ಪ ಬಣ್ಣನೆ

09022020 Huvinahadagali MP Prakash smarane
Published on

ಹೂವಿನಹಡಗಲಿ: ರಾಜಕಾರಣದಲ್ಲಿ ಅರಾಜಕತೆ ತಾಂಡವವಾಡುತ್ತಿದ್ದು, ಪ್ರಜಾಸತ್ತಾತ್ಮಕ ಮೌಲ್ಯಗಳು ನಾಶವಾಗುತ್ತಿವೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ರಂಗಭಾರತಿ, ಎಂ.ಪಿ.ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ 10ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಇಂದಿನ ಜನಪ್ರತಿನಿಧಿಗಳು ತಮ್ಮ ಆಸ್ತಿ ರಕ್ಷಣೆಗೆ ರಾಜಕಾರಣದಲ್ಲಿದ್ದಾರೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದಾರೆ. ಇದಕ್ಕೆ ಮುತ್ಸದ್ದಿ, ಎಂ.ಪಿ.ಪ್ರಕಾಶ್ ಅಪವಾದವಾಗಿದ್ದರು. ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಒದಗಿಸುವುದರ ಜತೆಗೆ ಅನೇಕರನ್ನು ರಾಜಕೀಯಕ್ಕೆ ಕರೆ ತಂದರು. ಇಂದು ಅವರು ಭೌತಿಕವಾಗಿ ನಮ್ಮ ಜತೆಗೆ ಇಲ್ಲ. ಆದರೆ, ಅವರ ಆದರ್ಶಗಳು ಎಂದಿಗೂ ಜೀವಂತವಾಗಿವೆ. ಅವರ ನೆನಪಿಗಾಗಿ ಕುಟುಂಬದವರು ಅನೇಕ ಕಾರ್ಯಕ್ರಮ ಏರ್ಪಡಿಸಿ ಅವರನ್ನು ಜೀವಂತವಾಗಿಟ್ಟಿದ್ದಾರೆ. ರಂಗಭೂಮಿ ಚಟುವಟಿಕೆಗಳ ಮೂಲಕ ಸಂವಿಧಾನದ ಉಳಿವಿಗಾಗಿ ಶ್ರಮಿಸಬೇಕಿದೆ ಎಂದರು.

ಗವಿಮಠದ ಡಾ.ಹಿರಿಶಾಂತವೀರಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು. ದಾವಣಗೆರೆ ರಂಗಕರ್ಮಿ ಬಾ.ಮಾ. ಬಸವರಾಜಯ್ಯ, ಬಯಲಾಟ ಅಕಾಡೆಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ವೈ.ಮಲ್ಲಪ್ಪ ಗವಾಯಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಹಾಲಪ್ಪ ಶಾಸ್ತ್ರಿ, ಆರೋಗ್ಯ ಇಲಾಖೆ ಶಿವರಾಯಪ್ಪ, ಎಂ.ಪಿ.ಪ್ರಕಾಶ್ ಪತ್ನಿ ರುದ್ರಾಂಬ ಪ್ರಕಾಶ್, ಮಕ್ಕಳಾದ ಎಂ.ಪಿ. ಸುಮಾ ವಿಜಯ್, ವೀಣಾ ಮಹಾಂತೇಶ ಇದ್ದರು. ಪ್ರೊ.ಶಾಂತಮೂರ್ತಿ ಕುಲಕರ್ಣಿ, ಕೊಟ್ರಯ್ಯಸ್ವಾಮಿ ನಿರ್ವಹಿಸಿದರು.

ನನ್ನ ತಂದೆ ಜೆ.ಎಚ್.ಪಟೇಲ್ ಹಾಗೂ ಎಂ.ಪಿ.ಪ್ರಕಾಶ್ ಉತ್ತಮ ವಾಗ್ಮಿಗಳಾಗಿದ್ದರು. ಅವರ ಆದರ್ಶಗಳು ಇಂದಿಗೂ ಜೀವಂತವಾಗಿವೆ. ಇಬ್ಬರೂ ಸದಾ ಬಡವರ್ಗದವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದರು. | ಮಹಿಮಾ ಜೆ.ಪಟೇಲ್ ಮಾಜಿ ಶಾಸಕ, ಚನ್ನಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net