

ಹೂವಿನಹಡಗಲಿ: ತಾಲೂಕಿನ ಮೋರಿಗೇರಿಯಿಂದ ಹಗರಿಬೊಮ್ಮಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯ ದುರಸ್ತಿ ಕಾಮಗಾರಿ ಆರಂಭಗೊಂಡಿದೆ.
ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಸೇತುವೆ ಹದಗೆಟ್ಟು ಸಂಚಾರಕ್ಕೆ ಅಸ್ತವ್ಯಸ್ತವಾಗಿತ್ತು. ಅಲ್ಲದೆ, ಮಳೆಗಾಲದಲ್ಲಿ ಹಳ್ಳ ತುಂಬಿ ಬಂದಾಗ ಪ್ರಯಾಣಿಕರು, ವಾಹನ ಸವಾರರು ಜೀವ ಭಯದಲ್ಲೇ ಸೇತುವೆ ದಾಟುತ್ತಿದ್ದರು. ಹೆಚ್ಚಿನ ಪ್ರಮಾಣದ ನೀರು ಹರಿದು ಕೆಳಭಾಗದ ಮಣ್ಣು ಸರಿದು ಸೇತುವೆ ಅರ್ಧದಷ್ಟು ಕುಸಿದಿದ್ದರಿಂದ ಲೋಕೋಪಯೋಗಿ ಇಲಾಖೆ ತಾತ್ಕಾಲಿಕವಾಗಿ ದುರಸ್ತಿಗೊಳಿಸಿದ್ದರೂ, ಸರಕು ಸಾಗಣೆ ವಾಹನಗಳ ಚಾಲಕರು ಭೀತಿಯಲ್ಲೇ ಚಲಾಯಿಸುತ್ತಿದ್ದರು. ಸದ್ಯ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಕಾಮಗಾರಿ ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಿದೆ.