ಮೈಲಾರದಲ್ಲಿ ಸಾಂಪ್ರದಾಯಿಕ ತ್ರಿಶೂಲ ಪೂಜೆ

170222 Maiara Karanika Trisula Pooja
ಹೂವಿನಹಡಗಲಿ ತಾಲೂಕಿನ ಮೈಲಾರ ದೇವಸ್ಥಾನದ ಆವರಣದಲ್ಲಿ ಧರ್ಮಕರ್ತರಾದ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ಸಾಂಪ್ರದಾಯಕ ತ್ರಿಶೂಲ ಹಾಗೂ ಆಯುಧ ಪೂಜೆ ನಡೆಯಿತು.
Published on

ಹೂವಿನಹಡಗಲಿ: ನಾಡಿನ ಹೆಸರಾಂತ ಧಾರ್ಮಿಕ ಕ್ಷೇತ್ರ ಮೈಲಾರದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಾತ್ರೆಯ ಎರಡನೆ ದಿನ ಗುರುವಾರ ಬೆಳಗ್ಗೆ ಸ್ವಾಮಿಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿ, ವಿಶೇಷ ಹೂವುಗಳಿಂದ ಸರ್ವಾಲಂಕಾರ ಮಾಡಲಾಗಿತ್ತು.

ತುಮಕೂರಿನ ಲಕ್ಷ್ಮಿ ಫ್ಲವರ್ ಡೆಕೋರೇಟ್ಸ್ ಇವರು ಹಲವು ವರ್ಷಗಳಿಂದ ಸ್ವಾಮಿಗೆ ಉಚಿತವಾಗಿ ಹೂವಿನ ಅಲಂಕಾರ ಮಾಡಿಕೊಂಡು ಬಂದಿದ್ದಾರೆ. ನಂತರ ದೇವಸ್ಥಾನದ ಆವರಣದಲ್ಲಿ ಧರ್ಮಕರ್ತರಾದ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ಸಾಂಪ್ರದಾಯಕ ತ್ರಿಶೂಲ ಹಾಗೂ ಆಯುಧ ಪೂಜೆ ನಡೆಯಿತು. ದೇವಸ್ಥಾನದ ಬಾಬುದಾರರು ಸೇರಿದಂತೆ ಅರ್ಚಕರಾದ ವಿರೂಪಾಕ್ಷಭಟ್ ಮತ್ತು ಪ್ರಮೋದ ಭಟ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಚ್.ಪ್ರಕಾಶ ರಾವ್ ಇದ್ದರು. ಕಾರ್ಣಿಕೋತ್ಸವದ ದಿನ ಶುಕ್ರವಾರ ಪ್ರಾತಃಕಾಲ 4 ಗಂಟೆಯಿಂದ ಮೈಲಾರಲಿಂಗೇಶ್ವರ, ಗಂಗಿಮಾಳಮ್ಮ ಹಾಗೂ ಹೆಗ್ಗಪ್ಪ ದೇವರ ಉತ್ಸವ ಡೆಂಕನ ಮರಡಿಗೆ ಗುಪ್ತ ಮೌನಸವಾರಿ ಹೊರಡುವುದು. ಸಂಜೆ 5.30ಕ್ಕೆ ಶ್ರೀಗುರು ಕಪಿಲಮುನಿಗಳ ಪೀಠದ ಗುರುಗಳವರಿಂದ ದೀಕ್ಷೆ ಪಡೆದ ಗೊರವಯ್ಯ ರಾಮಣ್ಣನವರು ಶ್ರೀಗಳ ಆರ್ಶಿವಾದ ಪಡೆದು ಬಿಲ್ಲನ್ನು ಹತ್ತಿ ವರ್ಷದ ಭವಿಷ್ಯವನ್ನು ನುಡಿಯುವರು.

ಕಾರ್ಣಿಕೋತ್ಸವ ಇಂದು
ಫೆ.18ರಂದು ಶುಕ್ರವಾರ ನಡೆಯಲಿರುವ ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಕ್ಷೇತ್ರದ ಡೆಂಕನ ಮರಡಿಯ ಮಧ್ಯಭಾಗದಲ್ಲಿವ 150 ಅಡಿ ಸುತ್ತಳತೆಯ ವೃತ್ತಾಕಾರದ ಮೈದಾನ ಮಾಡಿ ಭದ್ರವಾದ ಕಂಬಗಳನ್ನು ಹಾಕಿ ಕಾರ್ಣಿಕ ನುಡಿಯುವ ಸ್ಥಳಕ್ಕಾಗಿ ಸಿದ್ದಗೊಳಿಸಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಎಸ್.ಪಿ ಡಾ.ಅರಣುಕುಮಾರ ಸೇರಿದಂತೆ ಸ್ಥಳೀಯ ಜನ ಪ್ರತಿನಿಧಿಗಳು, ಮಠಾಧಿಪತಿಗಳು ಮತ್ತು ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ಭಾಗಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net