

ಹೂವಿನಹಡಗಲಿ: ತಾಲೂಕಿನ ಹಕ್ಕಂಡಿ ಗ್ರಾಮದಲ್ಲಿ ಹೊಸ್ತಿಲ ಹುಣ್ಣಿಮೆ ಅಂಗವಾಗಿ ಭಾನುವಾರ ನಡೆದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಉತ್ಸವದಲ್ಲಿ ಗೊರವಯ್ಯ ಹವಳದ ಚಂದ್ರಶೇಖರಗೌಡ ’ಮಳೆ ಮೋಡದ ನಡುವೆ ಗುಡುಗು ಗಾಬಾಗಿ ಮಿಂಚಿತಲೇ ಪರಾಕ್’ ಎಂಬ ಕಾರ್ಣಿಕ ಎಂದು ನುಡಿದರು.
ಬೆಳಿಗ್ಗೆಯಿಂದಲೇ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರು ಸ್ವಾಮಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಬಳಿಕ ಗೊರವಯ್ಯರು ಸರಪಳಿ ಪವಾಡ ನಡೆಸಿದರು. ನಂತರ ಗ್ರಾಮದ ಮರಡಿ ಭಾಗದಲ್ಲಿ ಕಾರ್ಣಿಕದ ಗೊರವಯ್ಯ ಹವಳದ ಚಂದ್ರಶೇಖರಗೌಡ ಬಿಲ್ಲನ್ನೇರಿ ನೆರೆದಿದ್ದ ಭಕ್ತ ಸಮೂಹಕ್ಕೆ ಸದ್ದಲೇ ಎಂದು ಕೂಗಿ, ‘ಮಳೆ ಮೋಡದ ನಡುವೆ ಗುಡುಗು ಗಾಬಾಗಿ ಮಿಂಚಿತಲೇ ಪರಾಕ್’ ಎಂದು ಕಾರ್ಣಿಕ ನುಡಿದರು. ನೆರೆದಿದ್ದ ಭಕ್ತರು ವಿವಿಧ ರೀತಿಯಲ್ಲಿ ಅರ್ಥೈಸಿಕೊಂಡರು.
ಈ ಭವಿಷ್ಯವಾಣಿಯಂತೆ ಮಳೆ-ಬೆಳೆ ಸಮೃದ್ಧವಾಗಿ ಆಗಲಿದೆ. ಜನರು ಸುಖದಿಂದ ಜೀವಿಸುವ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ’ ಎಂದು ಅರ್ಥೈಸಿಕೊಳ್ಳಲಾಯಿತು. ಸೋವೇನಹಳ್ಳಿ, ಅಂಕ್ಲಿ, ಹಂಪಸಾಗರ, ಕಾಲ್ವಿ, ಬಸರಹಳ್ಳಿ, ಮುದ್ಲಾಪುರ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.