

ಹೂವಿನಹಡಗಲಿ: ಹೆಣ್ಣುಮಕ್ಕಳು ಶಿಕ್ಷಣ ಪಡೆದು ಆರ್ಥಿಕವಾಗಿ ಶಕ್ತರಾದಾಗ ಸಮಾಜದಲ್ಲಿ ಮೇಲು, ಕೀಳು ಎಂಬ ಭಾವನೆ ತೊಲಗುತ್ತದೆ ಎಂದು ನಿವೃತ್ತ ಕನ್ನಡ ಉಪನ್ಯಾಸಕ ಶಾಂತವೀರಯ್ಯ ಹೇಳಿದರು.
ಪಟ್ಟಣದ ಸೊಪ್ಪಿನ ಕಾಳಮ್ಮನವರ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಕಪಟ್ಟಿಯಲ್ಲಿರುವ ಅಂಕಗಳಿಗಿಂತ ಒಳ್ಳೆಯ ಮನಸ್ಸು, ಕೆಲಸಗಳು ನಿಮ್ಮ ಸಾಮರ್ಥ್ಯದ ಅಳತೆಗೊಲುಗಳಾಗುತ್ತವೆ. ಹೆಣ್ಣುಮಕ್ಕಳು ಶಿಕ್ಷಣ ಪಡೆಯುವ ಮೂಲಕ ಉನ್ನತ ಹುದ್ದೆ ಅಲಂಕರಿಸಿ ಮಾದರಿಯಾಗಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಎ.ಕೊಟ್ರಗೌಡ, ನಿವೃತ್ತ ಉಪಪ್ರಾಚಾರ್ಯ ಕೆ.ಚಂದ್ರಗೌಡ, ನಿವೃತ್ತ ಉಪನ್ಯಾಸಕ ಎಂ.ಪಿ.ಎಂ.ದಯಾನಂದ ಸ್ವಾಮಿ ಮಾತನಾಡಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಉದ್ಘಾಟಿಸಿದರು. ಬಿಇಒ ಮಹೇಶ ಪೂಜಾರ, ಬಿಸಿಎಂ ವಿಸ್ತರಣಾಧಿಕಾರಿ ಎಂ.ಪಿ.ಎಂ.ಅಶೋಕ, ಉಪನ್ಯಾಸಕರಾದ ಬಿ.ಪ್ರಕಾಶ, ಮಹೇಂದ್ರ, ಪರಶುರಾಮ ನಾಗೋಜಿ ಇತರರಿದ್ದರು.