

ಹೂವಿನಹಡಗಲಿ: ಅಂತಾರಾಷ್ಟ್ರೀಯ ಸಂಬಂಧಗಳು ಒಂದು ದೇಶದ ಆರ್ಥಿಕ ಬೆಳವಣಿಗೆ ಮೇಲೆ ಪ್ರಭಾವ ಬೀರಲಿದೆ ಎಂದು ಹರಪನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಬುಳ್ಳಪ್ಪ ಹೇಳಿದರು.
ಪಟ್ಟಣದ ಜಿಬಿಆರ್ ಪದವಿ ಮಹಾವಿದ್ಯಾಲಯದ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಆರ್ಥಿಕತೆಯು ವಿಶ್ವ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯಬೇಕಾದರೆ ಒಂದು ದೇಶದಲ್ಲಿನ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಕೆಯಾಗಬೇಕು. ದೇಶದಲ್ಲಿ ಕೈಗಾರಿಕೆಗಳ ಉತ್ಪನ್ನ ಮತ್ತು ಬೇಡಿಕೆಗಳಿಂದ ಆರ್ಥಿಕತೆ ಭದ್ರವಾಗುತ್ತದೆ. ನಾವು ವಿದೇಶಿ ವಿನಿಮಯ ಮಾಡಿಕೊಳ್ಳಲು ಮುಂದಾಗಬೇಕು. ಚರ್ಮ ಮತ್ತು ಔಷಧೋತ್ಪನ್ನಗಳು, ಆಟೋಮೊಬೈಲ್ ವಸ್ತುಗಳು, ಜೈವಿಕ ರಸಾಯನಿಕಗಳು, ಕೈಮಗ್ಗ ವಸ್ತುಗಳು, ಸಿರಿಧಾನ್ಯಗಳು ಸೇರಿ ಅನೇಕ ಕೃಷಿ ಉತ್ಪನ್ನಗಳನ್ನು ರಪ್ತು ಮಾಡಲಾಗುತ್ತಿದೆ ಎಂದರು.
ಪ್ರಾಚಾರ್ಯ ಎಸ್.ಎಸ್.ಪಾಟೀಲ ಮಾತನಾಡಿ, ಭಾರತವು ಕೃಷಿ ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸಬಹುದಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ಮುಖ್ಯವಾಗಿದ್ದು, ಅದಕ್ಕೆ ವಿಭಿನ್ನ ಆಯಾಮಗಳಿವೆ ಎಂದರು. ಐಕ್ಯುಎಸಿ ಸಂಯೋಜಕಿ ಡಾ.ಮಹಿಮಾ ಜ್ಯೋತಿ, ಸಹಾಯಕ ಪ್ರಾಧ್ಯಾಪಕರಾದ ರವಿಕುಮಾರ್, ಮೊಹಿದ್ದೀನ್ ಕೆ, ಡಾ.ಶರಣಪ್ಪ, ಶೇಕ್ಷಾವಲಿ, ಬಡೇಸಾಬ್‌ನಾಯಕ ಹಾಗೂ ವಿದ್ಯಾರ್ಥಿಗಳು ಇದ್ದರು.