ನೆರೆ ಹಾವಳಿಗೆ ಮಕರಭ್ಬಿ ಬ್ಯಾಲಹುಣಸಿ ಗ್ರಾಮದ ರಸ್ತೆ ಬಂದ್

160722 Byalahunasi Road Band
ತುಂಗಭದ್ರಾ ನದಿಯ ನೀರಿನ ಪ್ರವಾಹದಿಂದಾಗಿ ಹೂವಿನಹಡಗಲಿ ತಾಲೂಕಿನ ಮಕರಭ್ಬಿ ಗ್ರಾಮದಿಂದ ಬ್ಯಾಲಹುಣಸಿ ಗ್ರಾಮಕ್ಕೆ ತೆರಳುವ ರಸ್ತೆಯ ಸೇತುವೆ ಮುಳುಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
Published on

ಹೂವಿನಹಡಗಲಿ: ತಾಲೂಕಿನ ತುಂಗಭದ್ರಾ ನದಿಯಂಚಿನ ಗ್ರಾಮಗಳಲ್ಲಿ ಮಳೆಯಾಗದಿದ್ದರೂ ನೆರೆ ಭೀತಿ ತಪ್ಪುತ್ತಿಲ್ಲ. ಭದ್ರಾ ಜಲಾಶಯದಿಂದ 1.74 ಲಕ್ಷ ಕ್ಯೂಸೆಕ್ ನೀರನ್ನು ತುಂಗಾಭದ್ರಾ ನದಿಗೆ ಬಿಟ್ಟ ಕಾರಣದಿಂದಾಗಿ ತಾಲೂಕಿನ ಹಿರೇಬನ್ನಿಮಟ್ಟಿ, ಮಕರಬ್ಬಿ, ಕೋಟಿಹಾಳ್, ಹೊಸಹಳ್ಳಿ, ಅಂಗೂರು, ಬ್ಯಾಲಹುಣಸಿ ಗ್ರಾಮಗಳು ಸೇರಿದಂತೆ ನದಿತೀರದ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ.

ತಾಲೂಕಿನ ಬ್ಯಾಲಹುಣಸಿ ಗ್ರಾಮಕ್ಕೆ ಮಳೆಗಾಲದಲ್ಲಿ ಮಳೆಯಾಗದಿದ್ದರೂ ಪ್ರತಿವರ್ಷವೂ ಮಳೆಗಾಲದಲ್ಲಿ ನೆರೆಯ ಭೀತಿ ತಪ್ಪುತ್ತಿಲ್ಲ. ತಾಲೂಕು ಕೇಂದ್ರದಿಂದ ಮಕರಬ್ಬಿ ಮಾರ್ಗವಾಗಿ ಬ್ಯಾಲಹುಣಸಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಚಿಕ್ಕದಾದ ಸೇತುವೆ ಇದ್ದು ಪ್ರತಿ ವರ್ಷವೂ ಹೊಳೆತುಂಬಿ ಬಂದಾಗ ಈ ಭಾಗದ ರಸ್ತೆಯ ಸಂಚಾರ ಸ್ಥಗಿತಗೊಳ್ಳುತ್ತಿದೆ. ಜನಪ್ರತಿನಿಧಿಗಳು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಗ್ರಾಮಗಳಿಗೆ ಭೇಟಿ ನೀಡುತ್ತಾರೆ. ಆದರೆ, ಇಂತಹ ಸಂದರ್ಭಗಳಲ್ಲಿ ಸಂಭವಿಸುವ ಅವಘಡಗಳಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಬ್ಯಾಲಹುಣಸಿ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಹಿರೇಬನ್ನಿಮಟ್ಟಿ ಗ್ರಾಮದ ಸುಮಾರು 50 ರಿಂದ 60 ಎಕರೆ ರೈತರ ಭೂಮಿಗೆ ನದಿನೀರು ನುಗ್ಗಿ ಮೆಕ್ಕೆಜೋಳ, ಕಬ್ಬು, ಅಡಕೆ, ಚೆಂಡು ಹೂ ಬೆಳೆಗಳು ನಾಶವಾಗಿವೆ. ತಾಲೂಕಿನ ಸಿಂಗಟಾಲೂರು ಬ್ಯಾರೇಜ್ ಗೆ ಭದ್ರಾ ಜಲಾಶಯದಿಂದ 1.74 ಲಕ್ಷ ಕ್ಯೂಸೆಕ್ ನೀರು ಒಳ ಹರಿವು ಇದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net