

ಹೂವಿನಹಡಗಲಿ: ಪಟ್ಟಣದಿಂದ ಜಿಲ್ಲಾ ಕೇಂದ್ರಕ್ಕೆ ತಡೆರಹಿತ ಬಸ್‌ಗಳ ಸಂಚಾರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ಸಾರಿಗೆ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ ಸಾರಿಗೆ ಘಟಕ ವ್ಯವಸ್ಥಾಪಕ ವೆಂಕಟಾಚಲಪತಿಗೆ ರಾಜ್ಯ ರೈತ ಸಂಘದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿ, ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಸಾಕಷ್ಟು ಜನರು ತೆರಳುತ್ತಾರೆ. ಆದರೆ, ಸರಿಯಾದ ಸಮಯಕ್ಕೆ ಸಾರಿಗೆ ಸೌಲಭ್ಯವಿಲ್ಲ. ಈ ಹಿಂದೆ ತಾಲೂಕು ಕೇಂದ್ರದಿಂದ ಹೊಸಪೇಟೆಗೆ ತಡೆರಹಿತ ಬಸ್ ಸಂಚರಿಸುತಿತ್ತು. ಈಗ ಅದು ಸ್ಥಗಿತಗೊಂಡಿದೆ. ಕೂಡಲೇ ತಡೆ ರಹಿತ ಬಸ್ ಸಂಚಾರ ಮತ್ತೆ ಆರಂಭಿಸಬೇಕು. ಈ ಮೂಲಕ ನಾನಾ ಕೆಲಸಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ತೆರಳುವವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಗ್ರಾಮೀಣ ಭಾಗದಿಂದ ಅನೇಕ ವಿದ್ಯಾರ್ಥಿಗಳು ತಾಲೂಕು ಕೇಂದ್ರಕ್ಕೆ ಆಗಮಿಸುತ್ತಾರೆ. ಅವರ ವಿದ್ಯಾಭ್ಯಾಸದ ದೃಷ್ಟಿಯಿಂದ ನಿಗದಿತ ಸಮಯಕ್ಕೆ ಸಾರಿಗೆ ಸೌಕರ್ಯ ಒದಗಿಸಿ ಎಂದು ಮನವಿ ಮಾಡಿದರು. ಸಂಘದ ಗೌರವಾಧ್ಯಕ್ಷ ಬಿ. ಫಕೀರಪ್ಪ, ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ, ಪದಾಧಿಕಾರಿಗಳಾದ ಶಿವರಾಜ್, ಡಾಕ್ಯ ನಾಯ್ಕ, ವಿಠಲನಾಯಕ್, ವಿ.ಬಿ.ಚನ್ನಬಸಪ್ಪ, ದೌಲತ್ ಸಾಬ್, ಗನಿಸಾಬ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕಿ ಕೆ.ಲಲಿತಮ್ಮ ಇದ್ದರು.