

ಹೂವಿನಹಡಗಲಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾದ ಇಂಗ್ಲಿಷ್ ವಿಷಯದ ಭಯ ಹೋಗಲಾಡಿಸಿ ಕಲಿಕಾಸಕ್ತಿ ಮೂಡಿಸಬೇಕು ಎಂದು ಬಿಇಒ ಮಹೇಶ್ ವಿ. ಪೂಜಾರ ಹೇಳಿದರು.
ಪಟ್ಟಣದ ಎಸ್‌ಆರ್‌ಎಂಪಿಪಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ ಮತ್ತು ತಾಲೂಕು ಇಂಗ್ಲಿಷ್ ವಿಷಯ ಶಿಕ್ಷಕರ ವೇದಿಕೆಯಿಂದ ಶುಕ್ರವಾರ ಆಯೋಜಿಸಿದ್ದ ಇಂಗ್ಲಿಷ್ ಶಿಕ್ಷಕರ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಕಠಿಣ ವಿಷಯಗಳನ್ನು ಸರಳವಾಗಿ ಬೋಧಿಸಬೇಕು. ಇಂಗ್ಲಿಷ್ ಗ್ರಾಮರ್ ಕಲಿಯಲು ನಿತ್ಯ ಹೋಮ್ ವರ್ಕ್ ನೀಡಬೇಕು. ಶಿಕ್ಷಕರ ವರ್ತನೆಯಿಂದಲೂ ಮಕ್ಕಳು ಸಾಕಷ್ಟು ಶಿಸ್ತನ್ನು ಕಲಿಯುತ್ತಾರೆ. ಅವರೊಂದಿಗೆ ಪ್ರೀತಿಯಿಂದ ವರ್ತಿಸಿ, ಕಲಿಕಾಸಕ್ತಿ ಮೂಡಿಸಬೇಕು ಎಂದರು.
ತಾಪಂ ಇಒ ಉಮೇಶ್ ಮೈನಹಳ್ಳಿ ಮಾತನಾಡಿ, ಶಾಲೆ ವಾತಾವರಣದಿಂದ ಮಕ್ಕಳ ಭವಿಷ್ಯ ರೂಪುಗೊಳ್ಳುತ್ತದೆ. ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಕ್ಕಳು ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ ಎಂದರು. ಉಪನಿರ್ದೇಶಕ ಕಚೇರಿ ವಿಷಯ ಪರಿವೀಕ್ಷಕ ಹುಲಿಬಂಡಿ, ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ಆಂಗ್ಲಭಾಷೆ ಸಂಪನ್ಮೂಲ ವ್ಯಕ್ತಿಗಳಾದ ಜಂಬುನಾಥ ವಗ್ಗಾ, ಎಚ್.ಮಲ್ಲಿಕಾರ್ಜುನ,
ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಶಿಕ್ಷಕರಾದ ಶಿವಬಸವಸ್ವಾಮಿ ಹಿರೇಮಠ, ಬಸಪ್ಪ, ಕಾಂತೇಶ್ ಎಚ್, ಎಂ.ಶೇಕ್ ಅಹಮದ್ ಇತರರಿದ್ದರು.