

ಹೂವಿನಹಡಗಲಿ: ಚಿಕ್ಕಕೊಳಚಿ ಗ್ರಾಮದಲ್ಲಿ ಶ್ರಾವಣ ಮಾಸದ ಸಪ್ತಮಿ (ಕರಿ) ದಿನವಾದ ಗುರುವಾರ ಪುರಾಣ ಕಾಲದ ಚಂಗಳಿಕವ್ವ ಹಾಗೂ ಗುಡ್ಡಪ್ಪ (ರತಿ-ಮನ್ಮಥ) ವಿವಾಹ ಗ್ರಾಮಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತು.
ಕುರುವತ್ತಿ ಮನೆತನದ ಗಂಡು ಹಾಗೂ ಹರಿಪುರ ಮನೆತನದ ಹೆಣ್ಣು ಗೊಂಬೆಗಳಾದ ಚಂಗಳಿಕವ್ವ ಮತ್ತು ಗುಡ್ಡಪ್ಪನಿಗೆ ಫಲ-ತಾಂಬೂಲ, ವಸ್ತ್ರಗಳ ವಿನಿಮಯ ನಂತರ ಎರಡೂ ಗೊಂಬೆಗಳನ್ನು ಗಂಡಿನ ಮನೆ ಮುಂದೆ ಕೂರಿಸಿ ಶಾಸ್ತ್ರೋಕ್ತವಾಗಿ ವಿವಾಹ ಮಾಡಲಾಯಿತು.
ನಂತರ ಮೆರವಣಿಗೆ ಮೂಲಕ ಗಂಗಾಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಆಷಾಢ ಮಾಸದಲ್ಲಿ ಕುಂಡಲಿಯಲ್ಲಿ ಹಾಕಿದ್ದ ಫಲಗಳನ್ನು ಹಿಡಿದು ತಂದಿದ್ದ ಹೆಣ್ಣು ಮಕ್ಕಳು, ಅವುಗಳಿಗೆ ಪೂಜೆ ಸಲ್ಲಿಸಿ ಹಳ್ಳದ ನೀರಿನಲ್ಲಿ ವಿಸರ್ಜಿಸಿದರು. ಬಳಿಕ ನೆರೆದಿದ್ದ ಎಲ್ಲರಿಗೂ ಫಲಾಹಾರ ನೀಡಿ ಸತ್ಕರಿಸಲಾಯಿತು.
ಮಳೆ-ಬೆಳೆ ಸಮೃದ್ಧವಾಗುವ ಹಾಗೂ ಮನೋಕಾಮನೆಗಳು ಈಡೇರುವ ನಂಬಿಕೆಯಿಂದ ಈ ವಿವಾಹ ನೆರವೇರಿಸಲಾಗುತ್ತಿದೆ. ಹಿರಿಯರ ಕಾಲದಿಂದಲೂ ಈ ಆಚರಣೆ ಚಾಲ್ತಿಯಲ್ಲಿದ್ದು, ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಗ್ರಾಮದ ಹಿರಿಯ ಕೆ.ಹಾಲೇಶಪ್ಪ ತಿಳಿಸಿದರು.