ಜಾನುವಾರು ಸಂತೆಯಲ್ಲಿಲ್ಲ ಸೌಲಭ್ಯ

Huvinahadagali cattle fair
ಹೂವಿನಹಡಗಲಿ ಎಪಿಎಂಸಿ ಬಳಿ ನಡೆಯುವ ಜಾನುವಾರು ಸಂತೆಯಲ್ಲಿ ಮಳೆ ನೀರು ನಿಂತಿರುವುದು.
Published on

ಹೂವಿನಹಡಗಲಿ: ಪಟ್ಟಣದ ಎಪಿಎಂಸಿ ಬಳಿ ಪ್ರತಿ ಸೋಮವಾರ ನಡೆಯುವ ಜಾನುವಾರು ಸಂತೆಗೆ ರಾಜ್ಯದ ವಿವಿಧ ಭಾಗಗಳಿಂದ ರೈತರು ಆಗಮಿಸುತ್ತಾರೆ. ಆದರೆ ಸಂತೆಗೆ ಬರುವ ಜಾನುವಾರು ಹಾಗೂ ರೈತರಿಗೆ ಮೂಲ ಸೌಲಭ್ಯಗಳು ಮರೀಚಿಕೆ ಆಗಿವೆ.

ಸೋಮವಾರ ನಡೆಯುವ ಜಾನುವಾರು ಸಂತೆಗೆ ರಾಜ್ಯದ ವಿವಿಧೆಡೆಯಿಂದ ರೈತರು ಭಾನುವಾರವೇ ಬರುತ್ತಾರೆ. ವಸತಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ರೈತರು ಜಾನುವಾರುಗಳೊಂದಿಗೆ ಎಲ್ಲೆಂದರಲ್ಲಿ ಮಲಗಿಕೊಳ್ಳುತ್ತಾರೆ. ಪ್ರಸ್ತುತ ಮಳೆಗಾಲ ಆಗಿರುವುದರಿಂದ ಸಂತೆ ಸ್ಥಳದಲ್ಲಿ ನೀರು ನಿಲ್ಲುತ್ತಿದ್ದು, ಅದರಲ್ಲೇ ಜಾನುವಾರುಗಳನ್ನು ಕಟ್ಟಿ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.

ರಾಜ್ಯ ಹೆದ್ದಾರಿಯಾದ ಮೈಲಾರ-ತೋರಣಗಲ್ಲು ರಸ್ತೆಯಲ್ಲಿ ಪ್ರತಿ ಸೋಮವಾರ ಜಾನುವಾರುಗಳು ಹಾಗೂ ವಾಹನಗಳ ಸಂಖ್ಯೆ ಹೆಚ್ಚಿ ಸಾರ್ವಜನಿಕರು ಪರದಾಡುವಂತಾಗಿದೆ. ರಸ್ತೆ ಬದಿಯೇ ವ್ಯವಹಾರ ನಡೆಯುವುದರಿಂದ ಖರೀದಿ ಬಳಿಕ ಜಾನುವಾರುಗಳನ್ನು ವಾಹನಗಳಲ್ಲಿ ಹತ್ತಿಸಿಕೊಳ್ಳುವಾಗ ಸುಮಾರು ಅರ್ಧ ಕಿ.ಮೀ. ವಾಹನಗಳು ಸಾಲಾಗಿ ನಿಲ್ಲುತ್ತವೆ. ಇದರಿಂದ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ.

ಜಾನುವಾರುಗಳನ್ನು ಮಾರಾಟ ಮಾಡಲು ಎರಡು ರ‌್ಯಾಂಪ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಬರುತ್ತಿರುವುದರಿಂದ ಸಮಸ್ಯೆ ಎದುರಾಗುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಮಳೆ ಬಂದಾಗ ಜಾನುವಾರು ಸಂತೆ ಸಂಪೂರ್ಣ ಜಲಾವೃತ್ತವಾಗುವುದರಿಂದ ಜಾನುವಾರುಗಳನ್ನು ಕಟ್ಟಿಹಾಕಲು ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಗಮನ ಹರಿಸಿ ಈ ಸಮಸ್ಯೆಯನ್ನು ಪರಿಹರಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

ಎಪಿಎಂಸಿ ಪಕ್ಕದಲ್ಲಿ ನಡೆಯುವ ಜಾನುವಾರು ಸಂತೆಗೆ ಪ್ರತಿ ಸೋಮವಾರ ರಾಜ್ಯದ ವಿವಿಧ ಭಾಗಗಳಿಂದ ರೈತರು ಬರುತ್ತಾರೆ. ಮಳೆ ಬಂದಾಗ ಮಾರುಕಟ್ಟೆ ಸಂಪೂರ್ಣ ಜಲಾವೃತಗೊಳ್ಳುವುದರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಇದರಿಂದ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. | ಶಿವರಾಜ ಹೊಳಗುಂದಿ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ, ಹೂವಿನಹಡಗಲಿ

ರಸ್ತೆಯಲ್ಲಿ ಜಾನುವಾರುಗಳನ್ನು ನಿಲ್ಲಿಸುವವರಿಗೆ ನೋಟಿಸ್ ನೀಡಲಾಗಿದೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಪೊಲೀಸ್ ಇಲಾಖೆಗೆ ಪ್ರತಿ ಸೋಮವಾರ ಸಿಬ್ಬಂದಿ ನಿಯೋಜನೆ ಮಾಡುವಂತೆ ಮನವಿ ಮಾಡಿದ್ದೇವೆ. ಆದರೆ, ಪೊಲೀಸ್ ಇಲಾಖೆಯವರು ಸಿಬ್ಬಂದಿ ನಿಯೋಜಿಸುತ್ತಿಲ್ಲ. ಆದಾಯದ ಕೊರತೆಯಿಂದಾಗಿ ಮಾರುಕಟ್ಟೆ ಅಭಿವೃದ್ಧಿ ಪಡಿಸಲು ಸಾಧ್ಯವಾಗಿರಲಿಲ್ಲ. ಈಗ ಆದಾಯ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿ ಮೂಲ ಸೌಲಭ್ಯ ಒದಗಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. | ತಿಮಪ್ಪನಾಯಕ ಎಪಿಎಂಸಿ ಕಾರ್ಯದರ್ಶಿ, ಹೂವಿನಹಡಗಲಿ ಜಾನುವಾರುಗಳನ್ನು ಮಾರಾಟ ಮಾಡಲು ತಂದಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net