

ಹೂವಿನಹಡಗಲಿ: ಹಗರಿಬೊಮ್ಮನಹಳ್ಳಿಯ ವಕೀಲ ಬಸವರಾಜ್ ಕರ್ಕಿಹಳ್ಳಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕೆಂದು ತಾಲೂಕು ವಕೀಲರು ಸಂಘ ಒತ್ತಾಯಿಸಿದೆ.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ಶಾಸ್ತ್ರೀವೃತ್ತದಲ್ಲಿ ಉಪತಹಸೀಲ್ದಾರ್ ಮಲ್ಲಿಕಾರ್ಜುನಗೆ ಮನವಿ ಸಲ್ಲಿಸಲಾಯಿತು. ವಕೀಲಕರ ಸಂಘದ ಉಪಾಧ್ಯಕ್ಷ ಎಂ.ಗಂಗಾಧರ ಮಾತನಾಡಿ, ನಮ್ಮ ಸಂಘದ ಎಲ್ಲ ಪದಾಧಿಕಾರಿಗಳು, ವಕೀಲರು ಸ್ವಯಂಪ್ರೇರಿತರಾಗಿ ಶುಕ್ರವಾರ ಕೋರ್ಟ್ ಕಲಾಪದಿಂದ ಹೊರಗುಳಿಯಲು ತೀರ್ಮಾನಿಸಿದ್ದೆವೆ. ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣ ಇಲ್ಲದಂತಾಗಿದೆ. ವಕೀಲ ಬಸವರಾಜ ಕರ್ಕಿಹಳ್ಳಿ ಮೇಲಿನ ಹಲ್ಲೆ ಈ ಮಾತಿಗೆ ಸಾಕ್ಷಿ. ಕೂಡಲೇ ಕರ್ಕಿಹಳ್ಳಿಗೆ ಸೂಕ್ರ ಪೊಲೀಸ್ ರಕ್ಷಣೆ ನೀಡಬೇಕು. ಹಲ್ಲೆಕೋರರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಕರ್ಜಗಿ ಕೊಟ್ರೇಶ್, ಸಹಕಾರ್ಯದರ್ಶಿ ಶಿವಲಿಂಗಯ್ಯ ಪ್ರಸಾದಿಮಠ, ಖಜಾಂಚಿ ಷನ್ಮುಖನಗೌಡ, ಮಹಿಳಾ ಪ್ರತಿನಿಧಿ ಕೆ.ಕವಿತಾ, ಎಂ.ಪರಮೇಶ್ವರಪ್ಪ, ಸಿ.ಕೆ.ಎಂ.ಬಸವಲಿಂಗಸ್ವಾಮಿ, ಎಚ್.ಎಸ್.ಛಬ್ಬಿ, ಎಂ.ಎನ್.ಮಂಜುನಾಥ, ಎಚ್.ರುದ್ರಪ್ಪ ಇತರರಿದ್ದರು.