ಜೀವನದಲ್ಲಿ ಶಿಕ್ಷಣದ ಜತೆ ಶಿಸ್ತು ಮುಖ್ಯ: ಹೊಳಲು ಗ್ರಾಮದಲ್ಲಿ ಸಿಐಡಿ ಎಸ್‌ಪಿ ರವಿ.ಡಿ ಚನ್ನಣ್ಣನವರ್ ಹೇಳಿಕೆ

26122021 Hadagali SP SP Ravid Channannanavar
Published on

ಹೂವಿನಹಡಗಲಿ: ಜೀವನದಲ್ಲಿ ಶಿಕ್ಷಣದ ಜತೆಗೆ ಶಿಸ್ತು ರೂಢಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಬೆಂಗಳೂರಿನ ಸಿಐಡಿ ಎಸ್‌ಪಿ ರವಿ.ಡಿ ಚನ್ನಣ್ಣನವರ್ ಹೇಳಿದರು.

ತಾಲೂಕಿನ ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಯಂಗ್ ಸ್ಟಾರ್ಸ್‌ ಗ್ರೂಪ್, ಸುರಭಿ ಮೊಲೋಡಿಸ್ ಹಾಗೂ ನಿತ್ಯಶ್ರೀ ಕೋ. ಆಪರೇಟಿವ್ ಬ್ಯಾಂಕ್ ಶನಿವಾರ ಹಮ್ಮಿಕೊಂಡಿದ್ದ ‘ಭವಿಷ್ಯದ ಬದುಕಿಕೊಂದು ಭರವಸೆಯ ಬೆಳಕು’ ದಿಕ್ಸೂಚಿ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ನಾಡು, ನುಡಿ ದೇಶ ಹಾಗೂ ಸಮಾಜಕ್ಕಾಗಿ ಜೀವನ ಮುಡಿಪಿಟ್ಟ ಸಾಧಕರ ಕಥೆಗಳನ್ನು ಹೇಳುವ ಮೂಲಕ ಆತ್ಮಸ್ಥೈರ್ಯ ತುಂಬಬೇಕು. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಅದಕ್ಕಾಗಿ ಕೀಳರಿಮೆ ತೊಡೆದು ಹಾಕಿ ಆತ್ಮವಿಶ್ವಾಸ ಬೆಳಸಿಕೊಳ್ಳಬೇಕು. ಅತಿಯಾದ ಮೊಬೈಲ್ ಬಳಕೆ ಬಿಡಬೇಕು. ಅಂತರ್ಜಾಲವನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾಗಿ ಬಳಸಿಕೊಳ್ಳಬೇಕು. ಒಂದು ಬಾರಿ ವಿಫಲರಾದಲ್ಲಿ ನಿರಾಶರಾಗದೆ, ನಿರಂತರ ಪ್ರಯತ್ನದಿಂದ ಗುರಿ ತಲುಪಬಹುದು ಎಂದು ಸಲಹೆ ನೀಡಿದರು.

ಸಾಹಿತಿ ಎಚ್.ಸುಭಾಶ್ಚಂದ್ರ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರಾದ ಎ.ಎಂ.ಪಿ.ವಾಗೀಶಗೆ, ಓಂಕಾರ ಜಿ.ಎಂ., ನಿತ್ಯಶ್ರೀ ಕೋ.ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಂತೋಷ ಕೊಟಗಿಗೆ ಸಮಾಜ ಸೇವಾ ರತ್ನಾ, ಪಂಡಿತ ಪದವಿಯಲ್ಲಿ ಚಿನ್ನದ ಪದಕ ಪಡೆದ ಹೊಳಲು ಗ್ರಾಮದ ಸಿದ್ಧೇಶ ಮರಿಹೊನ್ನಪ್ಪನವರಗೆ ಸಾಧಕ ರತ್ನ ಹಾಗೂ ರವಿ ಕುಂಬಾರಗೆ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಲಿಂಗನಾಯಕನಹಳ್ಳಿ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸ್ವಾಮಿ ವಿವೇಕಾನಂದ ಯಂಗ್ ಸ್ಟಾರ್ಸ್‌ ಗ್ರೂಪನ ಗೌರವಾಧ್ಯಕ್ಷ ಜಯಣ್ಣ ಗುಡಗೂರು, ಬಿಇಒ ಎಸ್.ಎನ್.ಹಳ್ಳಿಗುಡಿ, ಗ್ರಾಪಂ ಅಧ್ಯಕ್ಷೆ ನಾಗಮ್ಮ ಕುಂದಗೋಳ, ಪ್ರಮುಖರಾದ ಎನ್.ಮಂಜುನಾಥ, ಗುಡ್ಡಪ್ಪ ಬಡ್ಡಿ, ಕೊಟ್ರೇಶ ಜವಳಿ, ಎಲ್.ಮೂರ್ತಿ, ವೆಂಕಟೇಶ, ಮಂಜುನಾಥ ಹುಲ್ಲಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net