

ಹೂವಿನಹಡಗಲಿ: ಈರುಳ್ಳಿ ಬೆಲೆ ಕುಸಿತ ಹಿನ್ನೆಲೆಯಲ್ಲಿ ಕೆಂಚಮ್ಮನ ಹಳ್ಳಿ ಗ್ರಾಮದಲ್ಲಿ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದಿಂದ ಈರುಳ್ಳಿ ಕಲ್ಪಿತ ಶವಯಾತ್ರೆ ಮೂಲಕ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸಂಘದ ಅಧ್ಯಕ್ಷ ಎನ್.ಎಂ.ಸಿದ್ದೇಶ ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿ 30 ಸಾವಿರ ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದ್ದು, 1600 ರೈತ ಕುಟುಂಬಗಳು ಈರುಳ್ಳಿಗೆ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದವು. ಜಮೀನಿನಲ್ಲಿನ ಈರುಳ್ಳಿ ಕಟಾವು ಮಾಡಿದರೆ ಕೂಲಿ ಹಣವೂ ಸಿಗದ ಪರಿಸ್ಥಿತಿ ಇದೆ. ಈಗ ಕ್ವಿಂಟಾಲ್ ಈರುಳ್ಳಿಗೆ 600 ರಿಂದ 700 ರೂ. ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿನ ಈರುಳ್ಳಿ ಬೆಳೆಗಾರರ ಸಮಸ್ಯೆ ಪರಿಹರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದರು.
ಜಿಲ್ಲಾ ಕಾರ್ಯದರ್ಶಿ ಕನ್ನಹಳ್ಳಿ ವಸಂತಕುಮಾರ್ ಮಾತನಾಡಿ, ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸರ್ಕಾರದಿಂದ ಈರುಳ್ಳಿ ಖರೀದಿ ಕೇಂದ್ರ ಆರಂಭಿಸಬೇಕು. ಕ್ವಿಂಟಾಲ್ ಈರುಳ್ಳಿಗೆ ಕನಿಷ್ಠ ಎರಡು ಸಾವಿರ ರೂ. ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ, ರೈತರಾದ ಎಚ್.ಎಮ್.ವೀರಯ್ಯಸ್ವಾಮಿ, ಆಡೂರ್ ಗುರುಬಸವರಾಜ, ನಾಗರಾಜ, ಕನ್ನಹಳ್ಳಿ ಕೊಟ್ರಪ್ಪ, ಪ್ರಸಾದ್, ಗುರುಬಸವರಾಜ, ಕೆ.ಮಂಜುನಾಥ ಇತರರಿದ್ದರು.