

ಹೂವಿನಹಿಪ್ಪರಗಿ: ಕರೊನಾ ಕುರಿತು ಆತಂಕ, ಭಯ ಬೇಡ, ಯಾವುದೇ ಸಮಸ್ಯೆಯಿಲ್ಲದೆ ಆರೋಗ್ಯದಿಂದ ಮರಳಿ ಬಂದಿರುವೆ. ಸ್ವಚ್ಛತೆ, ಜಾಗೃತಿಯೊಂದೇ ಇದಕ್ಕೆ ಮದ್ದು ಎಂದು ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ಆ.15 ರಂದು ಕರೊನಾ ದೃಢಪಟ್ಟಿದ್ದರಿಂದ ಚಿಕಿತ್ಸೆ ಪಡೆದು ಬಂದಿರುವ ಅವರು, ‘ವಿಜಯವಾಣಿ’ ಪ್ರತಿನಿಧಿಯೊಂದಿಗೆ ತಮ್ಮ ಆತ್ಮಸ್ಥೈರ್ಯದ ಮಾತುಗಳನ್ನು ಕ್ಷೇತ್ರದ ಜನತೆಗೆ ತಿಳಿಸಿದರು.
ಯಾವ ವಯಸ್ಸಿನವರೂ ಹೆದರುವಂತಿಲ್ಲ. ಅದೊಂದು ಸಾಮಾನ್ಯ ರೋಗ. ಲಕ್ಷಣಗಳು ಕಂಡ ನಂತರ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಕರೊನಾಗಿಂತ ಅದರ ಭಯದಿಂದಲೇ ಜನಸಾಮಾನ್ಯರು ಬಳಲುವಂತಾಗಿದೆ. ಅಂದಾಜು 25 ವರ್ಷಗಳಿಂದ ನನಗೂ ಡಯಾಬಿಟಿಕ್ ಇದೆ. ಆದರೂ, ಈ ವೈರಸ್‌ನಿಂದ ಯಾವುದೇ ತೊಂದರೆಯಾಗಿಲ್ಲ. ಇದು ಜೀವಕ್ಕೆ ಅಪಾಯ ತರುವಂತಹ ರೋಗವಲ್ಲ. ಸರ್ಕಾರದ ನಿರ್ದೇಶನದಂತೆ ನಿಯಮಗಳನ್ನು ಪಾಲಿಸಿ ಎಂದರು.
ಕಳೆದ ಹಲವಾರು ತಿಂಗಳಿನಿಂದ ಕರೊನಾ ಸಮಯದಲ್ಲಿ ಎಡಬಿಡದೆ ಕ್ಷೇತ್ರದಲ್ಲಿ ಸಂಚರಿಸಿರುವುದರಿಂದ ನನಗೆ ಪಾಸಿಟಿವ್ ದೃಢಪಟ್ಟಿತ್ತು. ಈಗ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮರಳಿದ್ದೇನೆ. ಇನ್ನು ಒಂದು ವಾರದ ಮಟ್ಟಿಗೆ ಕ್ವಾರಂಟೈನ್‌ನಲ್ಲಿರಲು ವೈದ್ಯರು ಸೂಚಿಸಿದ್ದಾರೆ. ನಂತರ ಎಂದಿನಂತೆ ಮತಕ್ಷೇತ್ರದ ಜನಸೇವೆಗೆ ಮರಳುತ್ತೇನೆ. ನನ್ನ ಆರೋಗ್ಯ ಚೇತರಿಸಲಿ ಎಂದು ಪ್ರಾರ್ಥಿಸಿ, ಶುಭ ಹರಿಸಿದ ಎಲ್ಲರಿಗೂ ಕೃತಜ್ಞತೆಗಳು.
ಸೋಮನಗೌಡ ಪಾಟೀಲ ಸಾಸನೂರ, ಶಾಸಕರು ದೇವರಹಿಪ್ಪರಗಿ ಮತಕ್ಷೇತ್ರ.