ಗಣತಿಯಲ್ಲಿ ಹೂವಿನಹಡಗಲಿ ತಾಲೂಕು ಪ್ರಥಮ

Published on

ಹೂವಿನಹಡಗಲಿ: ತಾಲೂಕಿನಾದ್ಯಂತ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಗಣತಿಯನ್ನು ಪಟ್ಟಣ ಪಿಎಸ್‌ಐ ಮಣಿಕಂಠ ಅವರ ಮನೆ ಹಾಗೂ ಅಂಬೇಡ್ಕರ್ ನಗರದ ಕೆಲವು ಮನೆಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಶನಿವಾರ ಭೇಟಿ ನೀಡಿ ಗಣತಿ ಕಾರ್ಯದ ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾದ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಜಾತಿ ಗಣತಿ ನಡೆಯುತ್ತಿದ್ದು, ಗಣತಿಯಲ್ಲಿ ಹೂವಿನಹಡಗಲಿ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಹೂವಿನಹಡಗಲಿ ಶೇ.81.64, ಕೂಡ್ಲಿಗಿ ಶೇ.78.92, ಹಗರಿಬೊಮ್ಮನಹಳ್ಳಿ ಶೇ.77.26, ಹರಪನಹಳ್ಳಿ ಶೇ.77.17, ಕೊಟ್ಟೂರು ಶೇ.71.50, ಹೊಸಪೇಟೆ ಶೇ.49.54, ಸೇರಿ ಜಿಲ್ಲೆಯಲ್ಲಿ ಶೇ.69.27 ಗಣತಿ ಕಾರ್ಯ ನಡೆದಿದೆ. ಅ.7ರ ನಂತರವೂ ಗಣತಿ ಕಾರ್ಯ ಮುಂದುವರೆಯಲಿದೆ. ಹೊಸಪೇಟೆಯಲ್ಲಿ ಗಣತಿದಾರರ ಸಂಖ್ಯೆ ಕಡಿಮೆ ಇರುವುದರಿಂದ ಸಮೀಕ್ಷೆ ಕಾರ್ಯ ವೇಗವಾಗಿ ನಡೆಯುತ್ತಿಲ್ಲ. ಆದ್ದರಿಂದ ಹೆಚ್ಚುವರಿ 143 ಅಂಗನವಾಡಿ ಕಾರ್ಯಕರ್ತೆಯರನ್ನು ಗಣತಿಕಾರ್ಯಕ್ಕೆ ನಿಯೋಜಿಸಲಾಗಿದೆ. ತಾಲೂಕಿನಲ್ಲಿ 6 ಗ್ರಾಮಗಳು ಸಮೀಕ್ಷೆ ಮ್ಯಾಪಿಂಗ್‌ಗೆ ಒಳಪಟ್ಟಿರದ ಕಾರಣ ಆ ಗ್ರಾಮಗಳಲ್ಲಿ ಸಮೀಕ್ಷೆ ನಡೆದಿಲ್ಲ. ಕೇಂದ್ರ ಕಚೇರಿಯಲ್ಲಿ ಕೆಲ ತಾಂತ್ರಿಕ ದೋಷಗಳನ್ನು ಸರಿಪಡಿಸಿದ ನಂತರ ಸಮೀಕ್ಷೆ ನಡೆಸಲಾಗುವುದು ಎಂದರು.

ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ತಡೆಗೆ ತಂಡವನ್ನು ರಚಿಸಲಾಗುವುದು. ಈಗಾಗಲೇ ಜಿಲ್ಲಾಮಟ್ಟದಲ್ಲಿ ನಡೆದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಅಕ್ರಮ ಮರಳುಗಾರಿಕೆ ತಡೆಯುವಂತೆ ಸೂಚಿಸಲಾಗಿದೆ. ತಾಲೂಕಿನ ನದಿ ತೀರದ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಡೆಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ಕೆಲವು ದಿನಗಳಲ್ಲಿ ಮರಳುಗಾರಿಕೆಗೆ ಪರವಾನಗಿ ನೀಡಲಾಗುವುದು. ತಹಸಿಲ್ ಕಚೇರಿಯ ಉಪನೋಂದಣಾಧಿಕಾರಿಗಳ ಕಚೇರಿಯನ್ನು ಪುರಸಭೆಯ ಹಳೆ ಕಚೇರಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಹಸೀಲ್ದಾರ್ ಸಂತೋಷ್‌ಕುಮಾರ್, ಸಿಡಿಪಿಒ ರಾಮನಗೌಡ, ಪೌರಾಯುಕ್ತ ಇಮಾಮ್ ಸಾಹೇಬ್, ಪಿಎಸ್‌ಐ ಮಣಿಕಂಠ, ಬಿಇಒ ಮಹೇಶ್‌ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net