

ಮಡಿಕೇರಿ: ಕೊಡಗಿನ ಸುಗ್ಗಿಹಬ್ಬ ಪುತ್ತರಿ(ಹುತ್ತರಿ)ಯನ್ನು ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಸಂಭ್ರಮದಿಂದ ಆಚರಿಸಲಾಯಿತು.
ದಕ್ಷಿಣ ಕೊಡಗಿನ ಕೆಲವು ಭಾಗದಲ್ಲಿ ಗುರುವಾರ ಬೆಳಗ್ಗೆ ಆಚರಣೆ ಮಾಡಿದರೆ, ಉಳಿದಂತೆ ಬುಧವಾರ ರಾತ್ರಿ ಖದಿರು ತೆಗೆಯುವ ಮೂಲಕ ಪುತ್ತರಿ ಹಬ್ಬವನ್ನು ಆಚರಿಸಲಾಯಿತು. ಹುಣ್ಣಿಮೆಯ ಬೆಳದಿಂಗಳ ಬೆಳಕು, ಪಟಾಕಿಗಳ ಸಿಡಿತ, ಕೋವಿಯ ಸದ್ದು ಹಬ್ಬಕ್ಕೆ ವಿಶೇಷ ಮೆರುಗು ನೀಡಿತು. ಹಲವೆಡೆ ಐನ್‌ಮನೆಗಳಲ್ಲಿ ಮನೆ ಮಂದಿಯೆಲ್ಲ ಸೇರಿ ಸಾಮೂಹಿಕ ಆಚರಣೆಗಳು ನಡೆಸಿದರೆ ಮತ್ತೆ ಕೆಲವು ಕಡೆಗಳಲ್ಲಿ ದೇವಾಲಯಗಳು, ಜನಾಂಗದ ಸಮಾಜಗಳು ಸಾಂಪ್ರದಾಯಿಕ ಹಬ್ಬ ಆಚರಣೆಗೆ ಸಾಕ್ಷಿಯಾದವು.
ಭೂ ದೇವಿಗೆ ಕೃತಜ್ಞತೆ: ಕೃಷಿ ಪ್ರಧಾನ ಕೊಡಗಿನಲ್ಲಿ ಪುತ್ತರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಮುಂಗಾರು ಆರಂಭದಲ್ಲಿ ಗದ್ದೆಯನ್ನು ಉತ್ತು-ಬಿತ್ತಿ ಕಟಾವಿನ ಹಂತಕ್ಕೆ ಬಂದಾಗ ಭೂ ದೇವಿಗೆ ಕೃತಜ್ಞತಾ ಪೂರ್ವಕವಾಗಿ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕೊಡಗಿನಲ್ಲಿ ನೆಲೆ ಕಂಡುಕೊಂಡಿರುವ ಎಲ್ಲಾ ಜನಾಂಗದವರೂ ಪುತ್ತರಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಪಂಚಾಂಗ ನೋಡಿಯೇ ಆಚರಣೆ: ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಜ್ಯೋತಿಷಿಗಳು ನಿರ್ಧರಿಸಿದ ಮುಹೂರ್ತಕ್ಕೆ ಅನುಗುಣವಾಗಿ ಹಬ್ಬ ಆಚರಿಸಲಾಯಿತು. ರಾತ್ರಿ ರೋಹಿಣಿ ನಕ್ಷತ್ರದಲ್ಲಿ ಹಬ್ಬ ನಡೆಯಿತು. ಇಗ್ಗುತ್ತಪ್ಪ ದೇವಾಲಯದಲ್ಲಿ ೭.೨೦ ಕ್ಕೆ ನೆರೆ ಕಟ್ಟಿ, ೮.೨೦ ಕ್ಕೆ ಕದಿರು ತೆಗೆಯಲಾಯಿತು. ನಂತರ ನಾಡಿನಾದ್ಯಂತ ರಾತ್ರಿ ೭.೫೦ಕ್ಕೆ ನೆರೆ ಕಟ್ಟಿ, ೮.೫೦ಕ್ಕೆ ಕದಿರು ತೆಗೆದು, ೯.೫೦ಕ್ಕೆ ಬೋಜನ ಸ್ವೀಕರಿಸಲಾಯಿತು. ಮಡಿಕೇರಿ ನಗರದ ಓಂಕಾರೇಶ್ವರ ದೇಗುಲದಲ್ಲಿ, ಕೊಡವ ಸಮಾಜಗಳ ನೇತೃತ್ವದಲ್ಲಿಯೂ ಹಬ್ಬ ಆಚರಣೆ ಸಂಪ್ರದಾಯಬದ್ಧವಾಗಿ ಜರುಗಿತು.
ಹುತ್ತರಿ ಹಬ್ಬದ ವಿಶೇಷ ಖಾದ್ಯಗಳಾದ ಬೇಯಿಸಿದ ಹುತ್ತರಿ ಗೆಣಸು, ಹುರಿದ ಕುಸುಬಲಕ್ಕಿಯ ಪುಡಿಯಿಂದ ಮಾಡುವ ತಂಬಿಟ್ಟು, ಗದ್ದೆಯಿಂದ ಕೊಯ್ಲುಮಾಡಿ ತಂದ ಭತ್ತದಿಂದ ಮಾಡಿದ ಹೊಸ ಅಕ್ಕಿ ಒಳಗೊಂಡ ಪಾಯಸವನ್ನು ಕುಟುಂಬಸ್ಥರೆಲ್ಲಾ ಒಟ್ಟಿಗೆ ಸೇರಿ ಸವಿದು ಸಂಭ್ರಮಿಸಿದರು.
ಓಂಕಾರೇಶ್ವರ ದೇವಾಲಯದಲ್ಲಿ ಹುತ್ತರಿ ಹಬ್ಬ: ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಹುತ್ತರಿ ಹಬ್ಬ ಶ್ರದ್ಧಾಭಕ್ತಿಯಿಂದ ಬುಧವಾರ ನಡೆಯಿತು.
ಈ ಪ್ರಯುಕ್ತ ದೇವಾಲಯದಲ್ಲಿ ವಿವಿಧ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು. ದೇವಾಲಯದ ಆವರಣ ಮತ್ತು ಕಲ್ಯಾಣಿ ಸುತ್ತಲೂ ವಿದ್ಯುತ್ ದೀಪಗಳಿಂದ ಮತ್ತು ಜತೆಗೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ನಂತರ ರಾತ್ರಿ ೮.೫೦ಕ್ಕೆ ದೇವಾಲಯದ ಗದ್ದೆಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯುವ ಮೂಲಕ ಹುತ್ತರಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಬಳಿಕ ದೇವಾಲಯಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ಕದಿರು ವಿತರಣೆ ಮಾಡಲಾಯಿತು. ಕೊಡವ ಸಮಾಜ ವತಿಯಿಂದ ನಗರದ ಕೊಡವ ಸಮಾಜದಲ್ಲಿ ಕದಿರು ವಿತರಿಸಲಾಯಿತು.