ಜಿಲ್ಲೆಯಾದ್ಯಂತ ಹುತ್ತರಿ ಸಂಭ್ರಮ

Hutri
Published on

ಮಡಿಕೇರಿ:

ಶನಿವಾರ ಕೊಡಗಿನಾದ್ಯಂತ ಹುತ್ತರಿ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಸುಗ್ಗಿ ಹಬ್ಬದ ಸಂಭ್ರಮ ಜಿಲ್ಲೆಯಾದ್ಯಂತ ಮನೆ ಮಾಡಿದ್ದು, ಸುಂಟಿಕೊಪ್ಪ ಸಮೀಪದ ಪನ್ಯದ ಮಾಗುಲು ಐನ್ ಮನೆಯಲ್ಲೂ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಮಾಗುಲು ಐನ್ ಮನೆಯಲ್ಲಿ ಮೊದಲಿಗೆ ಮನೆಯವರು, ನೆಂಟರಿಸ್ಟರು ಹಾಗೂ ಊರಿನವರೆಲ್ಲಾ ಸೇರಿ ಮೊದಲಿಗೆ 7.50ಕ್ಕೆ ನೆರೆಕಟ್ಟಿ ನಂತರ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸಮಯ ನಿಗದಿಪಡಿಸಿದ 8.50 ರ ಸಮಯದಲ್ಲೆ ಕದಿರು ಕೊಯ್ಯಲಾಯಿತು. ಮಾಗುಲು ವಸಂತರವರ ಗದ್ದೆಯಲ್ಲಿ ಮಾಗುಲು ರವೀಂದ್ರರ ಕದಿರು ತೆಗೆದರು. ಬಳಿಕ ಸಮೀಪದ ಅಯ್ಯಪ್ಪ ದೇವರ ಸನ್ನಿಧಾನಕ್ಕೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿ. ಈ ಸಂದರ್ಭ ಎಲ್ಲರ ಬಾಯಲ್ಲಿ ಪೊಲಿ ಪೊಲೀಯೇ ಬಾ ದೇವ ಎಂಬ ಘೋಷ ವಾಕ್ಯ್ಯ ಮೊಳಗಿತು.

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಧಾನ್ಯಲಕ್ಷೀಯನ್ನ ಐನ್ ಮನೆಗೆ ತಂದು ಇರಿಸಲಾಯಿತು. ನಂತರ ವಿವಿಧ ಉಪಕರಣಗಳಿಗೆ ಕದಿರನ್ನ ಕಟ್ಟುವ ಸಂಪ್ರದಾಯ ನೆರವೇರಿಸಲಾಯಿತು. ಗದ್ದೆಯಿಂದ ತಂದ ಧಾನ್ಯಲಕ್ಷ್ಮಿಯ ಹೊಸ ಅಕ್ಕಿಯ ಊಟೋಪಚಾರ ಮಾಡಲಾಯಿತು. ಹುತ್ತರಿ ಹಬ್ಬದ ವಿಶೇಷ ಖಾದ್ಯಗಳಾದ ತಂಬಿಟ್ಟು, ಪಾಯಸ ಹಾಗೂ ಹುತ್ತರಿ ಗೆಣಸಿನ ಸಾರು ಸೇರಿದಂತೆ ಬಗೆ ಬಗೆಯ ಖಾದ್ಯಗಳನ್ನ ಉಣಬಡಿಸಲಾಯಿತು.

ಹುತ್ತರಿ ಹಬ್ಬದ ಮತ್ತೊಂದು ವಿಶೇಷ ಅಂದರೆ ಪಟಾಕಿ ಸಿಡಿಸುವುದು. ದೀಪಾವಳಿ ಮಾದರಿಯಲ್ಲಿ ಮಕ್ಕಳು, ಹಿರಿಯರು ಎಲ್ಲರೂ ಸೇರಿ ವಿವಿಧ ಬಗೆಯ ಪಟಾಕಿ ಸಿಡಿಸಿ ಹಬ್ಬಕ್ಕೆ ಮತ್ತಷ್ಟು ಮೆರಗು ಕೊಟ್ಟರು.

ಕುಶಾಲನಗರ ಗೌಡ ಸಮಾಜದಲ್ಲೂ ಹುತ್ತರಿಯನ್ನು ಸಂಭ್ರಮದಿAದ ಆಚರಿಸಲಾಯಿತು. ಗೌಡ ಸಮಾಜ ಆವರಣದಲ್ಲಿ ಸೇರಿದ ಸಮಾಜದ ಸದಸ್ಯರು ಲಘು ಉಪಹಾರದ ನಂತರ ನೆರೆ ಕಟ್ಟಿ, ಮೆರವಣಿಗೆಯಲ್ಲಿ ಶ್ರೀ ಗಣಪತಿ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದಾದ ಮೇಲೆ ಹಾರಂಗಿ ರಸ್ತೆಯಲ್ಲಿ ಇರುವ ಗೌಡ ಯುವಕ ಸಂಘದ ಜಮೀನಿಗೆ ತೆರಳಿ ನಿಗದಿತ ಸಮಯಕ್ಕೆ ಸರಿಯಾಗಿ ಕದಿರು ಕುಯ್ದು ಸಮಾಜ ಬಾಂಧವರಿಗೆ ಹಂಚಲಾಯಿತು.

ಕುಶಾಲನಗರ ಕೊಡವ ಸಮಾಜದ ವತಿಯಿಂದಲೂ ಸಡಗರದಿಂದ ಹುತ್ತರಿ ಹಬ್ಬ ಆಚರಿಸಲಾಯಿತು. ಹುತ್ತರಿ ಹಿನ್ನೆಲೆಯಲ್ಲಿ ಮಡಿಕೇರಿ ಓಂಕಾರೇಶ್ವರ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕದಿರು ಕೊಯ್ಯಲಾಯಿತು. ಪೊನ್ನಂಪೇಟೆ ತಾಲೂಕು ಬಾಡಗರಕೇರಿಯಲ್ಲಿ ಶ್ರೀ ಮೃತ್ಯುಂಜಯ ಸ್ವಾಮಿ ದೇವಾಲಯದಲ್ಲಿ ಹುತ್ತರಿ ಹಿನ್ನೆಲೆಯಲ್ಲಿ ಕದಿರು ಪೂಜೆ ಮಾಡಿ ಗ್ರಾಮಸ್ಥರಿಗೆ ಕದಿರು ಹಂಚಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net