ಕೊಡಗಿನಲ್ಲಿ ಹುತ್ತರಿ ಸಂಭ್ರಮ

Hutari celebration in Kodagu
Published on

ಮಡಿಕೇರಿ:

ಜಿಲ್ಲೆಯಾದ್ಯಂತ ಸೋಮವಾರ (ನ.೨೭) ರಾತ್ರಿ ಸುಗ್ಗಿ ಹಬ್ಬ ಹುತ್ತರಿಯನ್ನು ಸಡಗರದಿಂದ ಆಚರಿಸಲಾಯಿತು. ಧಾನ್ಯ ಲಕ್ಷ್ಮೀಯನ್ನು ಮನೆಗೆ ಬರಮಾಡಿಕೊಳ್ಳುವ ಈ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಿ, ಬಗೆ ಬಗೆಯ ತಿಂಡಿ, ತಿನಿಸುಗಳನ್ನು ಸವಿದು ಕೊಡಗಿನವರು ಸಂಭ್ರಮಿಸಿದರು.

ನಿಗದಿಯಂತೆ ನಾಪೋಕ್ಲು ಪಾಡಿ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಸಂಜೆ ೭.೨೦ಕ್ಕೆ ನೆರೆ ಕಟ್ಟಿ, ರಾತ್ರಿ ೮.೨೦ಕ್ಕೆ ಕದಿರು ತೆಗೆದು, ರಾತ್ರಿ ೯.೨೦ಕ್ಕೆ ಊಟೋಪಚಾರದ ಕಾರ್ಯಕ್ರಮಗಳು ನಡೆದರೆ, ಜಿಲ್ಲೆಯ ವಿವಿಧ ಭಾಗಗಳಲ್ಲಿ ರಾತ್ರಿ ೭.೪೫ಕ್ಕೆ ನೆರೆ ಕಟ್ಟಿ, ರಾತ್ರಿ ೮.೪೫ಕ್ಕೆ ಕದಿರು ತೆಗೆದು, ರಾತ್ರಿ ೯.೪೫ಕ್ಕೆ ಊಟೋಪಚಾರ ನಡೆಸಲಾಯಿತು. ಹಲವೆಡೆ ಮಂಗಳವಾರವೂ ಕದಿರು ತೆಗೆಯುವ ಸಂಪ್ರದಾಯವನ್ನು ನಡೆಸಲಾಯಿತು.

ಸಮೀಪದ ಮೇಕೇರಿಯ ಶ್ರೀ ಗೌರಿಶಂಕರ ಸನ್ನಿಧಿಯಲ್ಲಿ ಸಾಂಪ್ರದಾಯಿಕ ಹುತ್ತರಿ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ದೇವರಿಗೆ ಪೂಜೆ ಸಲ್ಲಿಸಲಾಯಿತು. ಮಹಾಪೂಜೆಯ ನಂತರ ಸೇರಿದ್ದವರಿಗೆ ಪ್ರಸಾದ ವಿತರಣೆ ನಡೆಯಿತು. ಸ್ಥಳೀಯರು, ಸುತ್ತಮುತ್ತಲಿನ ಗ್ರಾಮಸ್ಥರು ಶ್ರೀ ಗೌರಿಶಂಕರ ಸನ್ನಿಧಿಯಲ್ಲಿ ನಡೆದ ಹುತ್ತರಿ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಹಬ್ಬದ ಆಚರಣೆಯ ನಂತರ ದೇವಾಲಯದ ಆವರಣದ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net