

ವಿರಾಜಪೇಟೆ: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಗ್ರಾಮದ ಸರ್ಕಾರಿ ಜಾಗದಲ್ಲಿ ನಾಲ್ಕೈದು ದಿನಗಳ ಹಿಂದೆ ಗುಡಿಸಲುಗಳು ತಲೆ ಎತ್ತಿದ್ದು, ನಿರಾಶ್ರಿತರು ಸ್ಥಳದಲ್ಲಿ ಗುಡಿಸಲು ನಿರ್ಮಿಸಿಕೊಂಡು ದಿಡ್ಡಳ್ಳಿ ಮಾದರಿ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.
ಬಾಳುಗೋಡುವಿನ ಸರ್ವೇ ನಂಬರ್ 337/1ರಲ್ಲಿ 35 ಎಕರೆ ಜಾಗ ಇದ್ದು ಇದರ ಬಹುಪಾಲು ಒತ್ತುವರಿ ಆಗಿದೆ. ಬಾಕಿ ಉಳಿದಿದ್ದ 2ಎಕರೆ ಜಾಗವೂ ಒತ್ತುವರಿ ಆಗುವ ಭಯ ನಿರಾಶ್ರಿತರನ್ನು ಕಾಡುತ್ತಿದೆ. ಸೂರು ನಿರ್ಮಾಣ ಮಾಡಿಕೊಳ್ಳಲು ಸರ್ಕಾರಕ್ಕೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪರಿಶಿಷ್ಟ ಜಾತಿ ಹಾಗೂ ಪಂಗಡದ ಜಿಲ್ಲಾ ಉಸ್ತುವಾರಿ ಸಮಿತಿ ಸದಸ್ಯ ಪಳನಿ ಪ್ರಕಾಶ್ ಮಾಹಿತಿ ನೀಡಿದರು.
ವಿರಾಜಪೇಟೆ ಪಟ್ಟಣ ಸೇರಿದಂತೆ ಆರ್ಜಿ, ಬಾಳುಗೋಡು ಹಾಗೂ ಪೆರುಂಬಾಡಿ ವ್ಯಾಪ್ತಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಸ್ವಂತ ಸೂರಿಗಾಗಿ ಹಲವು ದಿನಗಳಿಂದ ಬಡಿದಾಡುತ್ತಿದ್ದಾರೆ. ಹಿರಿಯ ಕಾಲದಲ್ಲಿ ಕಾಫಿ ತೋಟಗಳ ಲೈನ್‌ಮನೆಗಳಲ್ಲಿದ್ದೆವು. ಇದೀಗ ಬಾಡಿಗೆ ಮನೆಗಳಲ್ಲಿದ್ದು ಬಾಡಿಗೆ ಕಟ್ಟುವ ಪರಿಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಸರ್ಕಾರ ಸೂರು ಒದಗಿಸುವವರೆಗೆ ಈ ಜಾಗ ಬಿಟ್ಟು ಕದಲುವುದಿಲ್ಲ ಎನ್ನುತ್ತಾರೆ.
ನಿವೇಶನ ರಹಿತರಿಗೆ ಸೂರು ಒದಗಿಸುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಆದಿವಾಸಿಗಳ ಸಮನ್ವಯ ಸಮಿತಿ ಅಧ್ಯಕ್ಷ ವೈ.ಕೆ.ಗಣೇಶ್ ಪತ್ರಿಕೆಗೆ ತಿಳಿಸಿದರು.
ಸರ್ಕಾರಿ ಜಾಗದಲ್ಲಿ ಒತ್ತುವರಿ ಮಾಡಿಕೊಳ್ಳುತ್ತಿರುವ ವಿಚಾರ ತಿಳಿದು ಸ್ಥಳ ಪರಿಶೀಲನೆ ನಡೆಸಲಾಗಿದೆ. ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಾಣ ಕಾನುನು ಬಾಹಿರ ಎಂದು ತಿಳಿಸಲಾಗಿದೆ. ಕೆಲವರು ಸ್ಥಳವನ್ನು ತೆರವುಗೊಳಿಸಿದ್ದಾರೆ. ನಿವೇಶನಕ್ಕಾಗಿ ಸಂಬಂಧಪಟ್ಟ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬೇಕು.
ಸಿ.ಬಿ.ಪಳಗಂಪ್ಪ ಕಂದಾಯ ಅಧಿಕಾರಿ