ವಕ್ಫ್ ಮಸೂದೆ ತಿದ್ದುಪಡಿಗೆ ವಿರೋಧ

25MDG2 (1)
Published on

ಮೂಡಿಗೆರೆ: ಕೇಂದ್ರ ಸರ್ಕಾರ ವಕ್ಫ್ ಮಸೂದೆ ತಿದ್ದುಪಡಿ ಹಿಂಪಡೆಯಬೇಕು ಎಂದು ಆಗ್ರಹಿಸಿ ವಕ್ಫ್ ಸಂರಕ್ಷಣಾ ಸಮಿತಿ ಸದಸ್ಯರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಜಾಕೀರ್‌ಹುಸೇನ್ ಮಾತನಾಡಿ, ಕೇಂದ್ರ ಸರ್ಕಾರ ವಕ್ಫ್ ಮಸೂದೆ ಜಾರಿ ಮಾಡಿರುವುದು ದೇಶದ ಮುಸ್ಲಿಂ ಸಮುದಾಯಕ್ಕೆ ಮಾಡುತ್ತಿರುವ ದ್ರೂಹ. ಕೇಂದ್ರ ಸರ್ಕಾರ ಕೂಡಲೇ ವಕ್ಫ್ ಮಸೂದೆ ತಿದ್ದುಪಡಿ ಹಿಂಪಡೆಯಬೇಕು. ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಅದರ ಭಾಗವಾಗಿ ಈ ವಕ್ಫ್ ಮಸೂದೆ ತಿದ್ದುಪಡಿಗೆ ಮುಂದಾಗಿದೆ ಎಂದು ಆರೋಪಿಸಿದರು.

ಮುಸ್ಲಿಂ ಸಮುದಾಯದವರು ತಮ್ಮ ಧಾರ್ಮಿಕ ಸಂಪ್ರದಾಯವನ್ನು ನಿರ್ವಹಿಸುವ ಮೂಲಕ ಎಲ್ಲ ಧರ್ಮದ ಜನರೊಂದಿಗೆ ಸಾಮರಸ್ಯದಿಂದ ಬಾಳಿ ಬದುಕುತ್ತಿದ್ದಾರೆ. ಆದರೆ ನಮ್ಮ ಹಕ್ಕನ್ನು ಉದ್ದೇಶ ಪೂರ್ವಕವಾಗಿ ಕಸಿದುಕೊಳ್ಳುವ ಪ್ರಯತ್ನ ನಡೆಸಿದರೆ ಇದಕ್ಕೆ ಮುಸ್ಲಿಂ ಸಮುದಾಯ ಹೆದರುವುದಿಲ್ಲ ಎಂದರು.

ಜಾದೀದ್ ಮಸೀದಿ ಮೌಲಾನ ವಾಜೀದ್ ಅಲಿ ಮಾತನಾಡಿ, ಮುಸ್ಲಿಂ ಸಮುದಾಯ ಸಮಾಜದಲ್ಲಿ ಎಲ್ಲರಂತೆ ಸ್ವಾಭಿಮಾನದಿಂದ ಬದುಕುವ ಉದ್ದೇಶ ಹಾಗೂ ಧರ್ಮದ ಆಚಾರ, ವಿಚಾರಗಳಿಗೆ ಅವಶ್ಯಕತೆಗಾಗಿ ದೇವರ ಹೆಸರಿನಲ್ಲಿ ಕೊಟ್ಟ ಜಾಗಕ್ಕೆ ವಕ್ಫ್ ಎನ್ನುತ್ತಾರೆ. ಈ ಸಂಸ್ಕೃತಿ ಕೇವಲ ಮುಸ್ಲಿಂ ಮಾತ್ರವಲ್ಲ. ಹಿಂದು, ಕ್ರೈಸ್ತ, ಬೌದ್ದ ಧರ್ಮದಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿದೆ. ಕೇಂದ್ರ ಸರ್ಕಾರ ನಮ್ಮ ಧರ್ಮ, ಆಚಾರ, ವಿಚಾರಗಳ ಜತೆ ಜೀವನ ನಡೆಸುತ್ತಿರುವ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುತ್ತಿರುವುದು ಸರಿಯಲ್ಲ. ನಮ್ಮ ಆಸ್ತಿ ಕೊತ್ತುಕೊಳ್ಳುವ ಪ್ರಯತ್ನ ಕೈ ಬಿಡಬೇಕು ಎಂದು ಮನವಿ ಮಾಡಿದರು.

ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ರಾಜಶೇಖರ್ ಮೂರ್ತಿಗೆ ಮನವಿ ಸಲ್ಲಿಸಿದರು. ಜಾಮಿಯಾ ಮಸೀದಿ ಮೌಲಾನ ಸೈಯದ್ ಇಜಾಝ್ ಅಹಮ್ಮದ್, ಚಕಮಕ್ಕಿ ಖಲಂದರಿಯಾ ಸಂಸ್ಥೆಯ ಸಿನಾನ್ ಫೈಝಿ, ಇಕ್ಬಾಲ್ ಮೌಲಾನ ಕಿತ್ತಲೆಗಂಡಿ, ವಕೀಲ ರಿಜ್ವಾನ್‌ಅಲಿ, ಜಿಯಾವುಲ್ಲಾ, ಅಲ್ತ್ಾ ಬಿಳಗುಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net