10 ವರ್ಷಗಳ ನಂತರ ಒಂದಾದ ಗಂಡ- ಹೆಂಡತಿ

High Court Logo
Published on


ಧಾರವಾಡ: ಕೌಟುಂಬಿಕ ಭಿನ್ನಾಭಿಪ್ರಾಯದಿಂದ ಕಳೆದ 10 ಹತ್ತು ವರ್ಷಗಳಿಂದ ದೂರವಾಗಿದ್ದ ದಂಪತಿಯನ್ನು ಇಲ್ಲಿನ ಹೈಕೋರ್ಟ್​ನ ಕಾನೂನು ಸೇವಾ ಸಮಿತಿ ಒಂದುಗೂಡಿಸಿದೆ.
ನಗರದ ಸುಜಾತಾ ಹಾಗೂ ಶಿವಮೊಗ್ಗದ ದೀಪಕ ದಿನಕರ ದಂಪತಿ 10 ವರ್ಷಗಳಿಂದ ದೂರವಾಗಿದ್ದರು. ವಿಚ್ಛೇದನ ಕೋರಿ ದೀಪಕ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 11 ವರ್ಷದ ಮಗಳಿರುವ ದಂಪತಿಯನ್ನು ನ್ಯಾಯಮೂರ್ತಿಗಳ ಸಲಹೆಯ ಮೇರೆಗೆ ಮಧ್ಯಸ್ಥಿಕೆದಾರರ ಎದುರು ಹಾಜರುಪಡಿಸಲಾಯಿತು. ಉಭಯ ಪಕ್ಷಗಾರರ ಸಂಬಂಧಿಕರು, ವಕೀಲರಾದ ಎಸ್.ಆರ್. ಹೆಗಡೆ ಮತ್ತು ಗಿರೀಶ ಹಿರೇಮಠ ಹಾಗೂ ಮಧ್ಯಸ್ಥಿಕೆದಾರರಾದ ಹನುಮಂತರೆಡ್ಡಿ ಸಾವ್ಕಾರ ಅವರ ಸಲಹೆಯಂತೆ ಮಗಳ ಜೀವನ ನಿರ್ವಹಣೆಯ ಉದ್ದೇಶದಿಂದ ರಾಜಿ ಮಾಡಿಕೊಂಡರು.
ನ್ಯಾಯಾಧೀಶರಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಪಿ. ಕೃಷ್ಣ ಭಟ್ ಅವರ ಸಮ್ಮುಖದಲ್ಲಿ ಒಂದಾದ ದಂಪತಿ ಶಿವಮೊಗ್ಗಕ್ಕೆ ತೆರಳಿದರು ಎಂದು ಹೈಕೋರ್ಟ್ ಪೀಠದ ಅಧಿಕ ವಿಲೇಖನಾಧಿಕಾರಿ ವೆಂಕಟೇಶ ಆರ್. ಹುಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net