

ಚಿಕ್ಕಬಳ್ಳಾಪುರ: ಪತಿಯು ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಕ್ಕೆ ಬೇಸತ್ತು ಗೃಹಿಣಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಡಿಬಂಡೆ ತಾಲೂಕಿನ ಕೊಂಡಾವಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಗೃಹಿಣಿಯನ್ನು ಕೆ.ಎಸ್. ಜಯಶ್ರೀ (೩೦). ತವರು ಮನೆಯ ಬಾತ್ ರೂಂನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಜಯಶ್ರೀ ಗುಡಿಬಂಡೆ ಪಟ್ಟಣದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಆರು ತಿಂಗಳ ಹಿಂದೆ ಶಿಡ್ಲಘಟ್ಟ ತಾಲ್ಲೂಕಿನ ಕೊಂಡಪ್ಪನಹಳ್ಳಿ ಗ್ರಾಮದ ಚಂದ್ರಶೇಖರ್ ಎಂಬ ಯುವಕನೊಂದಿಗೆ ವಿವಾಹವಾಗಿತ್ತು. ಆರು ತಿಂಗಳು ಸಂಸಾರ ಸುಖವಾಗಿರಬೇಕಿದ್ದ ಈ ಜೋಡಿ ದುರಂತಕ್ಕೆ ಸಾಕ್ಷಿಯಾಗಿದೆ. ಇನ್ನು ಆತ್ಮಹತ್ಯೆಗೂ ಮುನ್ನ ಜಯಶ್ರೀ ಸಾಮಾಜಿಕ ಜಾಲತಾಣದಲ್ಲಿ ಪತಿ ಚಂದ್ರಶೇಖರ್ ಅವರು ಬೇರೆ ಯುವತಿ ಜೊತೆಗೆ ನಿರಂತರವಾಗಿ ಚಾಟಿಂಗ್ ಮಾಡುತ್ತಿದ್ದರು. ಇದನ್ನು ಜಯಶ್ರೀ ಪ್ರಶ್ನಿಸಿದಾಗ, ಪತಿ ಚಂದ್ರಶೇಖರ್ ಅವರಿಂದ ತೀವ್ರವಾದ ಕಿರುಕುಳ ಎದುರಿಸಬೇಕಾಯಿತು. ಪತಿಯ ಈ ಕಿರುಕುಳ ಮತ್ತು ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್‌ನಲ್ಲಿ ಜಯಶ್ರೀ ಉಲ್ಲೇಖಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಗುಡಿಬಂಡೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.