ಅವಳು ನನ್ನ ಗಂಡನ ಜತೆಗಿದ್ದಾಳೆ ಎಂದು ಇವಳು ಕೋಣೆಗೆ ಬೀಗ ಹಾಕಿದಳು; ಗಂಡ-ಹೆಂಡತಿ ಮತ್ತು ಅವಳು.. ಆಮೇಲಾಗಿದ್ದೇನು?

Collage
ಲತಾ ಮತ್ತು ಸಂಗೀತಾ
Published on

ಬಾಗಲಕೋಟೆ: ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬ ಗಾದೆಮಾತು ಸುಳ್ಳಾದಂಥ ಪ್ರಕರಣ ಇದು. ತನ್ನ ಪತಿಯೊಂದಿಗೆ ಜಗಳವಾಡಿಕೊಂಡಿದ್ದ ಪತ್ನಿಗೆ ಇನ್ನೊಬ್ಬಳ ಮೇಲೆ ಅನುಮಾನ. ಇವರಿಬ್ಬರ ಜಗಳದಿಂದ ಮೂರನೆಯವಳ ಕಥೆ ತುಂಬಲಾರದ ನಷ್ಟ.

ಹೌದು.. ಇಂಥದ್ದೊಂದು ದುರಂತ ಬಾಗಲಕೋಟೆ ತಾಲೂಕಿನ ಗದ್ದನಕೇರಿಯಲ್ಲಿ ನಡೆದುಹೋಗಿದೆ. ಲತಾ ಈರಣ್ಣ ಅಂಗಡಿ ಎಂಬಾಕೆಯ ಅನುಮಾನಕ್ಕೆ ಸಂಗೀತಾ ಎಂಬವಳು ಇಹಲೋಕವನ್ನೇ ತೊರೆಯುವಂತೆ ಮಾಡಿದೆ. ಲತಾ ಇತ್ತೀಚೆಗೆ ತನ್ನ ಪತಿ ಈರಣ್ಣ ಜತೆ ಜಗಳ ಮಾಡಿಕೊಂಡು ತವರಿಗೆ ಹೋಗಿದ್ದಳು.

ಪತಿ ಜತೆ ಜಗಳ ಮಾಡಿಕೊಂಡಿದ್ದ ಲತಾಗೆ, ತನ್ನ ಪತಿಯ ಟೈಲರಿಂಗ್ ಅಂಗಡಿಗೆ ಹೊಲಿಗೆ ಕೆಲಸಕ್ಕೆ ಬರುತ್ತಿದ್ದ ಸಂಗೀತಾ ಮೇಲೆ ಅನುಮಾನ ಮೂಡಿತ್ತು. ಪತಿಗೂ ಸಂಗೀತಾಗೂ ನಡುವೆ ಅನೈತಿಕ ಸಂಪರ್ಕ ಇದೆ ಎಂದು ಆಕೆ ಶಂಕಿಸಿದ್ದಳು. ಅದೇ ಸಂದೇಹದಿಂದ ಸಂಗೀತಾ ಮನೆಯತ್ತ ಹೋಗಿದ್ದ ಲತಾ, ಅಲ್ಲಿ ಅವಳೊಂದಿಗೆ ತನ್ನ ಪತಿ ಇದ್ದಾನೆ ಎಂದುಕೊಂಡು ಕೋಣೆಗೆ ಬೀಗ ಹಾಕಿ ರಂಪ ಮಾಡಿದ್ದಳು. ಆದರೆ ಅಲ್ಲಿ ಪತಿ ಇರಲಿಲ್ಲ.

ಲತಾ ಅನುಮಾನದಿಂದ ಎಸಗಿದ ಈ ಕೃತ್ಯದಿಂದ ಅವಮಾನಕ್ಕೆ ಒಳಗಾಗಿ ನೊಂದ ಸಂಗೀತಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಆತ್ಮಹತ್ಯೆಯಲ್ಲ, ಲತಾ ಹಾಗೂ ಆಕೆಯ ಕಡೆಯವರು ಜತೆಯಾಗಿ ನಡೆಸಿದ ಕೊಲೆ ಎಂದು ಸಂಗೀತಾಳ ಸಂಬಂಧಿಕರು ಆರೋಪಿಸಿದ್ದಾರೆ.

ಲತಾ ಮೂಲತಃ ಬೀಳಗಿ ತಾಲೂಕಿನ ಕೋವಳ್ಳಿ ಗ್ರಾಮದವಳು. ಬೆಳಗಾವಿ ಜಿಲ್ಲೆಯ ರಾಮದುರ್ಗಕ್ಕೆ ಆಕೆಯನ್ನು ಮದುವೆ ಮಾಡಿಕೊಡಲಾಗಿತ್ತು. ಘಟನೆ ನಡೆದ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲತಾ ಹಾಗೂ ಆಕೆಯ ಜತೆಗಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net