ಹೆಂಡತಿಯ ಊರಿಗೆ ಬಂದ ಗಂಡ ನಿಮ್ಹಾನ್ಸ್‌ಗೆ ದಾಖಲು; ಹಾಡಹಗಲೇ ನಡೆಯಿತು ಭಯಾನಕ ಕೃತ್ಯ…

ಬೈಕ್
Published on

ಚಿಕ್ಕಬಳ್ಳಾಪುರ: ಹೆಂಡತಿಯ ಊರಿಗೆಂದು ಬಂದಿದ್ದ ಯುವಕನ ಮೇಲೆ ಹಾಡಹಗಲೇ ಹಲ್ಲೆ ನಡೆದಿದ್ದು, ದುಷ್ಕರ್ಮಿಗಳು ಹಿಂದಿನಿಂದ ಬಂದು ಲಾಂಗ್‌ ಬೀಸಿ ಪರಾರಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಸಂತೆಬೀದಿಯಲ್ಲಿ ಈ ಪ್ರಕರಣ ನಡೆದಿದೆ.

ತಮಿಳುನಾಡು ಮೂಲದ 32 ವರ್ಷದ ಯುವಕ ಯುವರಾಜ ಹಲ್ಲೆಗೊಳಗಾದವ. ಶಿಡ್ಲಘಟ್ಟದ ಸಂತೆಬೀದಿಯ ಶಾಮಣ್ಣಬಾವಿ ರಸ್ತೆಯಲ್ಲಿ ಈ ಹಲ್ಲೆ ಪ್ರಕರಣ ನಡೆದಿದೆ. ಈತ ಕಳೆದ ಡಿಸೆಂಬರ್‌ನಲ್ಲಿ ಶಿಡ್ಲಘಟ್ಟ ತಾಲೂಕಿನ ದಬರನಾಯಕನಹಳ್ಳಿಯ ಯುವತಿಯನ್ನು ಮದುವೆಯಾಗಿದ್ದ. ನವವಿವಾಹಿತ ದಂಪತಿ ಮೂರ್ನಾಲ್ಕು ದಿನಗಳ ಹಿಂದೆ ಈ ಹಳ್ಳಿಗೆ ಮರಳಿದ್ದರು.

ಇಂದು ಈತ ದಬರನಾಯಕನಹಳ್ಳಿಯಿಂದ ಶಿಡ್ಲಘಟ್ಟಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಲಾಂಗ್‌ನಿಂದ ಹಲ್ಲೆ ಮಾಡಿದ್ದಾರೆ. ಆಗ ಗಾಯಗೊಂಡ ಯುವರಾಜ ಬೈಕ್‌ನಿಂದ ಕೆಳಕ್ಕೆ ಬಿದ್ದಿದ್ದಾನೆ. ಆತ ಸತ್ತು ಹೋದ ಎಂದು ಭಾವಿಸಿದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಬಳಿಕ ಶಿಡ್ಲಘಟ್ಟ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುವಿಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಶಿಡ್ಲಘಟ್ಟ ನಗರ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net