

ಹಿರೀಸಾವೆ : ತಾಲೂಕಿನ ನೊರನಕ್ಕಿ ಗ್ರಾಮದಲ್ಲಿ ತವರು ಮನೆಯಿಂದ ವರದಕ್ಷಿಣೆ ತರುವಂತೆ ಗರ್ಭಿಣಿ ಪತ್ನಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿ ಕೊಲೆಗೈದ ಪತಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ನೊರನಕ್ಕಿ ಗ್ರಾಮದ ನಯನಾ(24) ಮೃತ. ಅಯ್ಯಪ್ಪ (31) ಹತ್ಯೆ ಮಾಡಿದ ನಂತರ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಘಟನೆಯ ವಿವರ: ನುಗ್ಗೇಹಳ್ಳಿ ಹೋಬಳಿ ದೊಡ್ಡರಿ ಕಾವಲು ಗ್ರಾಮದ ನಯನಾಳನ್ನು ದಂಡಿಗನಹಳ್ಳಿ ಹೋಬಳಿ ನೂರನಕ್ಕಿ ಗ್ರಾಮದ ಅಯ್ಯಪ್ಪನೊಂದಿಗೆ ಕಳೆದ ಮೂರು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.
ದಂಪತಿಗಳಿಗೆ ಒಂದು ಗಂಡು ಮಗು ಇತ್ತು. ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ನಯನಾಗೆ ವರದಕ್ಷಿಣೆ ತರುವಂತೆ ಪತಿ ಅಯ್ಯಪ್ಪ ಪದೇ ಪದೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ನಯನಾ ಎರಡು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಲ್ಲದೆ ಕುಟುಂಬಸ್ಥರು ಸೇರಿ ಪಂಚಾಯಿತಿ ಸಹ ಮಾಡಿದ್ದರು. ಆದರೂ ಬುದ್ದಿ ಕಲಿಯದ ಅಯ್ಯಪ್ಪ ಪತ್ನಿ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. ಅಲ್ಲದೆ ತಾನೂ ಸಹ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾನೆ.
ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಕೈಗೊಂಡಿದ್ದಾರೆ.