ಪತ್ನಿಯ ಕತ್ತು ಹಿಸುಕಿ ಹತ್ಯೆಗೈದ ಪತಿ

crime
Published on

ನೆಲಮಂಗಲ: ನಗರದ ಭಕ್ತನಪಾಳ್ಯದ ವಿಶ್ವಶಾಂತಿ ಬಡಾವಣೆಯಲ್ಲಿ ಭಾನುವಾರ ರಾತ್ರಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ ಪತಿ ಸೋಮವಾರ ಠಾಣೆಗೆ ತೆರಳಿ ಶರಣಾಗಿದ್ದಾನೆ.

ವಿಶ್ವಶಾಂತಿ ಬಡಾವಣೆ ನಿವಾಸಿ, ಮೂಲತ ಬೆಂಗಳೂರಿನ ವಿಜಯನಗರದ ಸಲ್ಮಾ(30) ಮೃತೆ. ಈಕೆಯ ಪತಿ, ತುಮಕೂರಿನ ಕ್ಯಾತಸಂದ್ರದ ಇಮ್ರಾನ್​ ಪಾಷಾ(35) ಆರೋಪಿ.

ಮಾಡೆಲಿಂಗ್​ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಸಲ್ಮಾ ಹಾಗೂ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್​ ಪಾಷಾ 8 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು,6 ತಿಂಗಳಿಂದ ವಿಶ್ವಶಾಂತಿ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಸಲ್ಮಾ, ಪರ ಪುರುಷರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್​ ಹಾಗೂ ಅಶ್ಲೀಲ ವಿಡಿಯೋ ಕರೆಗಳನ್ನು ಮಾಡುತ್ತಾಳೆ. ಅಲ್ಲದೇ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಶಂಕಿಸಿ ಇಮ್ರಾನ್​ ಪಾಷಾ ಆಗಾಗ ಜಗಳವಾಡುತ್ತಿದ್ದ. ಭಾನುವಾರ ರಾತ್ರಿ ದಂಪತಿ ಮದ್ಯ ಸೇವಿಸಿದ್ದು, ಈ ವೇಳೆ ಅನೈತಿಕ ಸಂಬಂಧ ವಿಚಾರವಾಗಿ ಜಗಳವಾಗಿದೆ. ಕೋಪಗೊಂಡ ಇಮ್ರಾನ್​, ಸಲ್ಮಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಪೊಲೀಸರಿಗೆ ಶರಣು

ತಡರಾತ್ರಿ ಪತ್ನಿಯನ್ನು ಕೊಲೆ ಮಾಡಿದ್ದ ಇಮ್ರಾನ್​ ನಗರದ ವಿವಿಧೆಡೆ ಸುತ್ತಾಡಿ ಸೋಮವಾರ ಬೆಳಗ್ಗೆ 7 ಗಂಟೆಗೆ ನಗರ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ. ಎಸ್ಪಿ ಸಿ.ಕೆ.ಬಾಬ, ತಹಸೀಲ್ದಾರ್​ ಅಮೃತ್​ಆತ್ರೇಶ್​, ಡಿವೈಎಸ್​ಪಿ ಜಗದೀಶ್​, ನಗರ ಪೊಲೀಸ್​ ಠಾಣೆ ಆರಕ್ಷಕ ನಿರೀಕ್ಷಕ ಭರತ್​ಗೌಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಮರಣೋತ್ತರ ಪರೀೆಗೆಂದು ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net