ಕಬಾಬ್ ರುಚಿಯಾಗಿ ಇರಲಿಲ್ಲ ಅಂತ ಹೆಂಡ್ತಿಗೆ ಇರಿದು ಹಲ್ಲೆ ಮಾಡಿದ; ಮರುದಿನವೇ ಆತ್ಮಹತ್ಯೆ ಮಾಡ್ಕೊಂಡ!

death
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಪತ್ನಿ ಮಾಡಿದ್ದ ಕಬಾಬ್ ಚೆನ್ನಾಗಿರಲಿಲ್ಲ ಆಕೆಗೆ ಇರಿದು ಹಲ್ಲೆ ಮಾಡಿದ್ದ ಪತಿ, ಅದರ ಮರುದಿನವೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿದೆ. ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.

ಎಂ. ಸುರೇಶ್​ ಹಾಗೂ ಆತನ ಪತ್ನಿ ಶಾಲಿನಿ ಇಬ್ಬರೂ ಗಾರ್ಮೆಂಟ್​ ನೌಕರರಾಗಿದ್ದು, ಬನ್ನೇರುಘಟ್ಟ ಬಳಿಯ ಮನೆಯೊಂದರಲ್ಲಿ ನೆಲೆಸಿದ್ದರು. ಮಂಗಳವಾರ ಸಂಜೆ ಮನೆಗೆ ಬಂದಿದ್ದ ಪತಿ, ಪತ್ನಿ ಬಳಿ ಕಬಾಬ್​ ಮಾಡುವಂತೆ ಹೇಳಿದ್ದ. ಆಕೆ ಮಾಡಿದ್ದರೂ ಅದು ಅಷ್ಟು ರುಚಿಕರವಾಗಿರಲಿಲ್ಲ ಅಂತ ಸಿಟ್ಟಾದ ಸುರೇಶ್, ಆಕೆಯ ತಲೆ, ಕೈಗೆಲ್ಲ ಇರಿದು, ಹಲ್ಲೆ ಮಾಡಿದ್ದ.

ಸಹಾಯ ಕೋರಿ ಆಕೆ ಕಿರುಚಿದ್ದನ್ನು ಕೇಳಿಸಿಕೊಂಡ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯವರ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆಕೆಯ ಹೇಳಿಕೆಯನ್ನೂ ಪಡೆದಿದ್ದರು. ಇತ್ತ ಶಾಲಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ಬುಧವಾರ ಪೊಲೀಸರು ಸುರೇಶ್​ನನ್ನು ಹುಡುಕಿಕೊಂಡು ಆತನ ಮನೆಗೆ ಹೋಗಿದ್ದರು. ಆದರೆ ಅಷ್ಟರಲ್ಲಾಗಲೇ ಆತ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪೊಲೀಸರಿಗೆ ಕಂಡುಬಂದಿತ್ತು. ಹೆಂಡತಿ ಮೇಲಿನ ಹಲ್ಲೆಯ ಪ್ರಕರಣ ಗಂಭೀರವಾಗಬಹುದು ಎಂಬ ಭಯದಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net