ಪತ್ನಿ ಶೀಲ ಶಂಕಿಸಿ ಕೊಲೆಗೈದ ಗಂಡ

Published on

ಚಾಕುವಿನಿಂದ ಇರಿದು ಹತ್ಯೆ, ಪೊಲೀಸ್ ವಶಕ್ಕೆ ಪತಿ

ಹನೂರು : ತಾಲೂಕಿನ ಒಡೆಯರಪಾಳ್ಯ ಸಮೀಪದ ಗುಳ್ಯದ ಬಯಲು ಗ್ರಾಮದಲ್ಲಿ ಬುಧವಾರ ಪತಿಯೊಬ್ಬ ಶೀಲ ಶಂಕಿಸಿ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.

ಗ್ರಾಮದ ಮಾದೇವಿ (28) ಕೊಲೆಯಾದ ದುರ್ದೈವಿ. ಭದ್ರ ಎಂಬಾತನೇ ಕೊಲೈಗೈದ ಪತಿ. ಗ್ರಾಮದ ಕುಂಭಯ್ಯ ಅವರ ಮಗಳಾದ ಮಾದೇವಿ ಅವರನ್ನು 0 ವರ್ಷದ ಹಿಂದೆ ಇದೇ ಗ್ರಾಮದ ಈರಣ್ಣ ಮಗನಾದ ಭದ್ರ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ನಾಲ್ಕೈದು ವರ್ಷದಿಂದ ಮೃತಳ ಸಹೋದರ ಮಾದಪ್ಪ ಅವರ ಮನೆಯಲ್ಲಿ ವಾಸವಿದ್ದರು. ಆದರೆ ಮೂರ‌್ನಾಲ್ಕು ತಿಂಗಳಿನಿಂದ ಆಗ್ಗಾಗ್ಗೆ ಭದ್ರ ಪತ್ನಿ ಮೇಲೆ ಅನುಮಾನಗೊಂಡು ಗಲಾಟೆ ನಡೆಸುತ್ತಿದ್ದು, ಕೋಲೆ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದನು. ಈ ವೇಳೆ ಕುಟುಂಬಸ್ಥರು ಆತನನ್ನು ಸಮಾಧಾನಪಡಿಸುತ್ತಿದ್ದರು. ಮಂಗಳವಾರ ರಾತ್ರಿ ಸುಮಾರು 11ರ ವೇಳೆಯಲ್ಲಿ ಗಲಾಟೆ ಮಾಡುತ್ತಿದ್ದ ಈತನಿಗೆ ಕುಟುಂಬಸ್ಥರು ಬುದ್ದಿವಾದ ಹೇಳಿದ್ದರು. ಆದರೆ ಬುಧವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಗಲಾಟೆ ತೆಗೆದ ಭದ್ರ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಈ ಬಗ್ಗೆ ತಿಳಿದ ಸ್ಥಳೀಯರು ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಹನೂರು ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಭದ್ರನನ್ನು ವಶಕ್ಕೆ ಪಡೆದರು. ಮೃತರ ಸಹೋದರ ಮಾದಪ್ಪ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಹನೂರು ಪೊಲೀಸರು ಮೃತದೇಹವನ್ನು ಹನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರಕ್ಕೆ ರವಾನಿಸಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net