ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಕೊಂದ ಪತಿ

Untitled-6
Published on

ಆನೇಕಲ್​ : ತವರಿಗೆ ಹೋಗಿ ವಾಪಾಸ್​ ಬಂದಿದ್ದ ಪತ್ನಿಯನ್ನು ಪತಿಯೇ ಸೋಮವಾರ ತಡರಾತ್ರಿ ಕೊಲೆ ಮಾಡಿದ್ದಾನೆ.

ವಾಬಸಂದ್ರದ ನಂಜಾರೆಡ್ಡಿ ಬಡಾವಣೆಯಲ್ಲಿ ವಾಸವಿದ್ದ ಒಡಿಶಾ ಮೂಲದ ರ್ಬಸಾ ಪ್ರಿಯದರ್ಶಿನಿ (21) ಮೃತೆ.

ಕೊಲೆ ಮಾಡಿ ತಲೆಮರೆಸಿಕೊಂಡಿರುವ ಪತಿ ಸೋಹನ್​ ಕುಮಾರ್​ಗಾಗಿ ಪೊಲೀಸರು ಶೋಧಿಸುತ್ತಿದ್ದಾರೆ. ರ್ಬಸಾ ಪ್ರಿಯದರ್ಶಿನಿ ಕಳೆದ ಶನಿವಾರ ಒಡಿಶಾದಿಂದ ಬಂದಿದ್ದಳು. ಆದರೆ ಸೋಮವಾರ ರಾತ್ರಿ ಕಂಠಪೂರ್ತಿ ಕುಡಿದಿದ್ದ ಪತಿ ಅಮಲಿನಲ್ಲಿ ಪತ್ನಿ ಜತೆ ಜಗಳ ಮಾಡಿ, ನಶೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕಣ್ಣೆದುರೆ ತಾಯಿಯನ್ನು ಕೊಲೆ ಮಾಡುವುದನ್ನು ಕಂಡ ಒಂದೂವರೆ ವರ್ಷದ ಮಗು ಹೊರಗೆ ಬಂದು ಅಳುವುದನ್ನು ನೋಡಿದ ಮನೆಯ ಮಾಲಕಿ ಸ್ಥಳಕ್ಕೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರೂ ಪ್ರೀತಿಸಿ ತಮಿಳುನಾಡಿನಲ್ಲಿ ವಿವಾಹವಾಗಿದ್ದರು. ವಿವಾಹದ ಬಳಿಕ ಸೋಹನ್​ ಕುಮಾರ್​ ಸ್ವಗ್ರಾಮ ಬಿಹಾರಕ್ಕೆ ತೆರಳಿದ್ದರು. ಆದರೆ ಆತನ ಪಾಲಕರು ರ್ಬಸಾ ಪ್ರಿಯದರ್ಶಿನಿಯನ್ನು ಸೊಸೆ ಯಾಗಿ ಒಪ್ಪಿಕೊಂಡಿರಲಿಲ್ಲ. ಅಲ್ಲಿಂದ ಪತ್ನಿ ತವರೂರು ಒಡಿಶಾಗೆ ಬಂದಿದ್ದ ಸೋಹನ್​ ಕುಮಾರ್​ ಆರೇ ತಿಂಗಳಿಗೆ ಬೆಂಗಳೂರಿಗೆ ಬಂದಿದ್ದ. ಗಂಡು ಮಗು ಜನಿಸಿದರೂ ಅವಳನ್ನು ನೋಡಲು ಹೋಗಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ರ್ಬಸಾ ಪ್ರಿಯದರ್ಶಿನಿ ಪಾಲಕರು ಬೇರೆ ಮದುವೆ ಆಗುವಂತೆ ಒತ್ತಾಯಿಸಿದ್ದರು. ಆದರೆ ಪತಿಯೇ ಬೇಕು ಎಂದು ಹೆತ್ತವರನ್ನು ಬಿಟ್ಟು ಬೆಂಗಳೂರಿಗೆ ಬಂದಿದ್ದಳು. ಪ್ರಕರಣ ದಾಖಲಿಸಿಕೊಂಡಿರುವ ಜಿಗಣಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಆಕ್ಸ್​ಫರ್ಡ್​ ಆಸ್ಪತ್ರೆಗೆ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net