ಪತ್ನಿ ಕುತ್ತಿಗೆ ಕುಯ್ದು ಕೊಂದ ಪತಿ: ಕಾಳೇನಹಳ್ಳಿ ಗ್ರಾಮದಲ್ಲಿ ಘಟನೆ

Crime Logo
Published on

ಮಂಡ್ಯ: ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಪತಿಯೇ ಪತ್ನಿ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದಾನೆ. ಅಂತೆಯೇ ಕೃತ್ಯ ನಡೆದ ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ಶ್ವೇತಾ(38) ದುರ್ದೈವಿ. ಪತಿ ಲೋಕೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು 17 ವರ್ಷದ ಹಿಂದೆ ಬೆಂಗಳೂರಿನಲ್ಲಿ ವಾಸವಿದ್ದಾಗ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 16 ವರ್ಷದ ಮಗಳಿದ್ದಾಳೆ. ನಾಲ್ಕೈದು ವರ್ಷದ ಹಿಂದೆ ದಂಪತಿ ಕಾಳೇನಹಳ್ಳಿಗೆ ಬಂದು ವಾಸವಿದ್ದರು. ಈ ನಡುವೆ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಲೋಕೇಶ್, ಕುಡಿತಕ್ಕೆ ದಾಸನಾಗಿದ್ದನು. ಹಣ ಕೊಡುವಂತೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದನು. ಈ ಸಂಬಂಧ ಹಿಂದೊಮ್ಮೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಾದ ನಂತರ ಸಂಬಂಧಿಕರು ಲೋಕೇಶ್‌ಗೆ ತಿಳಿವಳಿಕೆ ಹೇಳಿದ್ದರು.

ಆದರೆ ಅ.22ರಂದು ಮಧ್ಯರಾತ್ರಿ ದಂಪತಿ ನಡುವೆ ಮತ್ತೆ ಜಗಳವಾಗಿದೆ. ಕುಪಿತಗೊಂಡಿದ್ದ ಪತಿ ಗುದ್ದಲಿಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಆಕೆಯ ತಲೆ ಬಲಭಾಗ ಜಜ್ಜಿ ಹೋಗಿತ್ತು. ಇದಲ್ಲದೆ ಚಾಕುವಿನಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದಾನೆ. ಘಟನೆ ಸಮಯದಲ್ಲಿ ಮಗಳ ಮೇಲೂ ಹಲ್ಲೆಗೆ ಮುಂದಾಗಿದ್ದು, ಅದೃಷ್ಟವಶಾತ್ ತಪ್ಪಿಸಿಕೊಂಡು ಬಂದು ಸಂಬಂಧಿಕರಿಗೆ ವಿಷಯ ತಿಳಿಸಿದ್ದಾಳೆ. ಅಲ್ಲಿಗೆ ಹೋಗುವಷ್ಟರಲ್ಲಿ ಶ್ವೇತಾ ಮೃತಪಟ್ಟಿದ್ದಳು.

ಸ್ಥಳಕ್ಕೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಇನ್ಸ್‌ಪೆಕ್ಟರ್ ಕೆ.ಬಿ.ಶಿವಪ್ರಸಾದ್‌ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃತ್ಯವೆಸಗಿ ಗ್ರಾಮದಲ್ಲಿಯೇ ಅವಿತುಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net