ಪ್ರಿಯಕರನನ್ನು ನಂಬಿ ಹೋಗಿದ್ದ ಪತ್ನಿಗೆ ಪತಿಯೇ ಆಸರೆ

pavan
Published on

ಗೌರಿಬಿದನೂರು: ಪ್ರಿಯಕರನನ್ನು ನಂಬಿ ಗಂಡ ಹಾಗೂ ಮಗನನ್ನು ಬಿಟ್ಟು ಬಂದಿದ್ದ ವಿವಾಹಿತೆಯು ನ್ಯಾಯಕ್ಕಾಗಿ ಪ್ರಿಯಕರನ ಮನೆ ಮುಂದೆ ಏಕಾಂಗಿಯಾಗಿ ಧರಣಿ ನಡೆಸಿ, ಕೊನೆಗೆ ಮಾನವೀಯತೆ ದೃಷ್ಟಿಯಲ್ಲಿ ಪತಿಯೇ ಮನೆಗೆ ಕರೆದುಕೊಂಡು ಹೋದ ಸುಖಾಂತ್ಯದ ಹೈಡ್ರಾಮಾ ತಾಲೂಕಿನಲ್ಲಿ ನಡೆದಿದೆ.

ಗೌರಿಬಿದನೂರು ತಾಲೂಕಿನ ಗ್ರಾಮವೊಂದರ 22 ವರ್ಷದ ಯುವತಿಯನ್ನು ಕೆಲ ವರ್ಷಗಳ ಹಿಂದೆ ಆಂಧ್ರಪ್ರದೇಶದ ಯುವಕನಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಗಂಡು ಮಗು ಇತ್ತು. ಆದರೆ, ಇಲ್ಲಿನ ಪವನ್​ ಕುಮಾರ್​ (23) ಎಂಬಾತನ ಪ್ರೀತಿಯ ಬಲೆಗೆ ಬಿದ್ದಿದ್ದ ಆಕೆ, ವಿಚ್ಛೇದನಕ್ಕೆ ಅರ್ಜಿ ಹಾಕಿ ಮಗುವನ್ನು ಅಜ್ಜಿ ತಾತನ ಮನೆಯಲ್ಲೆ ಬಿಟ್ಟು ಬಂದಿದ್ದ ಸಂತ್ರಸ್ತೆಗೆ ಇತ್ತೀಚೆಗೆ ಪ್ರಿಯಕರ ಕೈಕೊಟ್ಟಿದ್ದ.

ಪ್ರಿಯಕರನ ವಿರುದ್ಧ ಆರೋಪ

ಗಂಡನಿಗೆ ವಿಚ್ಛೇದನ ನೀಡಿದರೆ ಮದುವೆಯಾಗುತ್ತೇನೆ, ಹೊಸ ಜೀವನ ಪ್ರಾರಂಭಿಸೋಣ ಎಂದು ಆರೋಪಿ ಪವನ್​ಕುಮಾರ್​ ನಂಬಿಸಿದ್ದ. ಇದನ್ನು ನೆಚ್ಚಿಕೊಂಡು ಗಂಡನನ್ನು ಬಿಟ್ಟು ಬಂದ ಪ್ರಿಯತಮೆಯನ್ನು ಮೊದಲಿಗೆ ಯಲಹಂಕ ಬಳಿಯ ಸಿಂಗನಾಯಕನಹಳ್ಳಿಗೆ ಕರೆದೊಯ್ದು ಎರಡು ತಿಂಗಳು ಬಾಡಿಗೆ ಮನೆಯಲ್ಲಿ ಜೀವನ ನಡೆಸಿದ್ದಾನೆ. ಆದರೆ, ಇತ್ತೀಚೆಗೆ ತಂದೆ ಹಾಗೂ ಕುಟುಂಬದ ಸದಸ್ಯರು ಆೇಪ ವ್ಯಕ್ತಪಡಿಸಿದ ಕಾರಣ 12 ದಿನಗಳ ಹಿಂದೆ ಪ್ರಿಯತಮೆಯನ್ನು ಬೈಕ್​ನಲ್ಲಿ ಕರೆ ತಂದು ಬಿಟ್ಟು ಹೋಗಿದ್ದಾನೆ. ಅಂದು ನಾಪತ್ತೆಯಾದವನು ಇದುವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ. ಆತನ ಕುಟುಂಬದವರು ಕೂಡ ಮನೆಗೆ ಬೀಗ ಹಾಕಿ, ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇಕ್ಕಟ್ಟಿಗೆ ಸಿಲುಕಿದ ಮಹಿಳೆ ಪ್ರಿಯಕರನ ಮನೆ ಎದುರು ಏಕಾಂಗಿಯಾಗಿ ಧರಣಿ ನಡೆಸಿ ಅಳಲು ತೋಡಿಕೊಂಡಿದ್ದಾಳೆ.

ಮುಚ್ಚಳಿಕೆ ಬರೆದುಕೊಟ್ಟಿದ್ದರು

ಈ ಹಿಂದೆ ಪ್ರಕರಣವು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಗ ಸಂಧಾನ ನಡೆಸಲಾಗಿತ್ತು. ಪತಿಗೆ ವಿಚ್ಛೇದನ ನೀಡಿದರೆ ಇಬ್ಬರೂ ಜತೆಯಲ್ಲಿ ವಾಸಿಸುತ್ತೇವೆ ಎಂದು ಪ್ರೇಮಿ ಮುಚ್ಚಳಿಕೆ ಬರೆದುಕೊಟ್ಟಿದ್ದ ಎನ್ನಲಾಗಿದೆ. ಆದರೆ ಈಗ ಆತನೇ ನಾಪತ್ತೆಯಾಗಿದ್ದಾನೆ. ಇದಕ್ಕೆ ಮತ್ತೊಮ್ಮೆಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿ 12 ದಿನ ಕಳೆದರೂ ಯಾವುದೇ ಕ್ರಮ ಜರುಗಿಸಿಲ್ಲ. ಇದರ ನಡುವೆ ಪೊಲೀಸ್​ ಇಲಾಖೆ ಹಾಗೂ ಮಹಿಳಾ ಆಯೋಗ ಅನ್ಯಾಯಕ್ಕೊಳಗಾಗಿರುವ ನ್ಯಾಯ ದೊರಕಿಸಿಕೊಡಬೇಕು ಎಂದು ಧರಣಿ ನಿರತ ಸಂತ್ರಸ್ತೆ ಮನವಿ ಮಾಡಿದ್ದರು.

ಕರೆದುಕೊಂಡು ಹೋದ ಪತಿ

ಪ್ರಿಯಕರ ಕೈಕೊಟ್ಟು ಪತ್ನಿ ಮನೆಯ ಮುಂಭಾಗ ಧರಣಿ ನಡೆಸುತ್ತಿದ್ದ ಮಾಹಿತಿ ತಿಳಿದುಕೊಂಡ ಪತಿರಾಯನೇ ಸ್ಥಳಕ್ಕೆ ಬಂದು ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಕುಟುಂಬಸ್ಥರು ಹಳೆಯದನ್ನು ಮರೆತು ಸಂಸಾರ ನಡೆಸಿಕೊಂಡು ಹೋಗಲು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net