ಪತ್ನಿ ಕಿರುಕುಳದಿಂದ ಪತಿ ಆತ್ಮಹತ್ಯೆ

crime
Published on

ಹುಬ್ಬಳ್ಳಿ: ಪತ್ನಿ ಕಿರುಕುಳ ತಾಳಲಾರದೇ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಯ ಚಾಮುಂಡೇಶ್ವರಿ ನಗರದಲ್ಲಿ ಭಾನುವಾರ ನಡೆದಿದೆ.

ಪೀಟರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ‘ಡ್ಯಾಡಿ ಆಯಾಮ್ ಸ್ಸಾರಿ’, ಪಿಂಕಿ(ಪತ್ನಿ) ಇಸ್ ಕಿಲ್ಲಿಂಗ್ ಮೀ, ಸೀ ವಾಂಟ್ ಮೈ ಡೆತ್’ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮೃತ ಪೀಟರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಕೆಲ ದಿನಗಳಿಂದ ಗಂಡ -ಹೆಂಡತಿ ಮಧ್ಯೆ ಜಗಳವಾಗುತ್ತಿತ್ತು.

ಹೆಂಡತಿ ಪಿಂಕಿ ಖಾಸಗಿ ಶಾಲಾ ಶಿಕ್ಷಕಿ. ಗಂಡನಿಂದ ಡೈವೋರ್ಸ್ ಪಡೆಯಲು ಪತ್ನಿ ಪಿಂಕಿ ಕೋರ್ಟ್ ಮೊರೆ ಹೋಗಿದ್ದಳು. ವಿಚ್ಛೇದನ ಕೋರಿ ಜೀವನಾಂಶಕ್ಕಾಗಿ 20 ಲಕ್ಷ ರೂ. ಕೊಡುವಂತೆ ಪೀಡಿಸುತ್ತಿದ್ದಳಂತೆ. ಕಳೆದ ಏಳೆಂಟು ತಿಂಗಳಿಂದ ಪತಿಯಿಂದ ದೂರವಾಗಿದ್ದಳು. ಅನೈತಿಕ ಸಂಬಂಧ ಹೊಂದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ನಿತ್ಯ ಜಗಳವಾಡುತ್ತಿದ್ದಳು. ಇದರಿಂದ ನಮ್ಮ ಮಗ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೀಟರ್ ತಂದೆ ಓಬಯ್ಯ ಹಾಗೈ, ತಾಯಿ ರುಬಿಕಮ್ಮ ಗಂಭೀರ ಆರೋಪ ಮಾಡಿದ್ದಾರೆ. ಪೀಟರ್ ಪತ್ನಿ, ಪತ್ನಿ ಕುಟುಂಬದವರನ್ನು ಬಂಧಿಸಿ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ಡೆತ್ ನೋಟ್‌ನಲ್ಲಿ ತನ್ನ ಶವದ ಪೆಟ್ಟಿಗೆ ಮೇಲೆ ಹೆಂಡತಿಯ ಕಿರುಕುಳವೇ ಸಾವಿಗೆ ಕಾರಣ ಎಂದು ಬರೆಯಿಸುವಂತೆ ಮೃತ ಪೀಟರ್ ಮನವಿ ಮಾಡಿದ್ದರಂತೆ. ಹೀಗಾಗಿ ಶವದ ಪೆಟ್ಟಿಗೆ ಮೇಲೆ ‘ನನ್ನ ಹೆಂಡತಿಯ ಕಾಟ ತಾಳಲಾರದೆ ಸತ್ತೇನು’ ಎಂದು ಬರೆಸುವ ಮೂಲಕ ಕುಟುಂಬಸ್ಥರು ಪೀಟರ್ ಕೊನೆ ಆಸೆ ಈಡೇರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಶೋಕ ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net