ಸಾಲಕ್ಕೆ ಹೆದರಿ ಗಂಡ ಆತ್ಮಹತ್ಯೆ

Published on

ಹನೂರು : ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದಲ್ಲಿ ಪತ್ನಿಯ ಕರಿಮಣಿ ಮಾಲೀಕ ನೀನಲ್ಲ ರೀಲ್ಸ್‌ನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಕುಮಾರ್ ಪ್ರಕರಣ ಮೃತನ ಪತ್ನಿ ರೂಪಾ ನೀಡಿದ ಹೇಳಿಕೆಯಿಂದ ಮತ್ತೊಂದು ತಿರುವನ್ನು ಪಡೆದುಕೊಂಡಿದೆ.

ನನ್ನ ಪತಿ ಕುಮಾತ್ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ನನ್ನಿಂದಂತೂ ಅಲ್ಲ. ನಮ್ಮ ಮಕ್ಕಳಾಣೆಗೂ ಅಲ್ಲ. ಫೆ.10 ರಂದು ನನಗೆ ಅವರು ಹೂ ಮುಡಿಸಿ, ಮಕ್ಕಳೊಂದಿಗೆ ಹೋಟೆಲ್‌ನಲ್ಲಿ ತಿಂಡಿ ತಿನ್ನಿಸಿ ನಮ್ಮಮ್ಮನ ಮನೆಗೆ ಬಿಟ್ಟು ಬಂದಿದ್ದರು ಎಂದು ಅಳುತ್ತಾ ಮಾಧ್ಯಮಗಳಿಗೆ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಇತ್ತ ಮೃತನ ಸೋದರ ಮಹದೇವಸ್ವಾಮಿ ವಿಜಯವಾಣಿಯೊಂದಿಗೆ ಮಾತನಾಡಿ, ದೂರು ನೀಡಿ ಎರಡು ದಿನವಾದರೂ ಪೊಲೀಸರು ವಿಚಾರಣೆ ಆರಂಭಿಸಿಲ್ಲ ಎಂದು ಆರೋಪಿಸಿದ್ದಾರೆ.

ಮೃತ ಕುಮಾರ್ ಪತ್ನಿ ರೂಪಾ ತವರೂರಾದ ಗುಂಡಾಪುರಕ್ಕೆ ಫೆ.10 ರಂದು ಆಗಮಿಸಿದ್ದ ವೇಳೆ ಸೋದರ ಮಾವ ಗೋವಿಂದನೊಂದಿಗೆ ಉಡುತೊರೆ ಜಲಾಶಯಕ್ಕೆ ತೆರಳಿ ನೀರಿನಲ್ಲಿ ನಿಂತು ಕರಿಮಣಿ ಮಾಲೀಕ ಹಾಡಿಗೆ ರೀಲ್ಸ್ ಮಾಡಿ ತನ್ನ ಸ್ಟೇಟಸ್ ಹಾಗೂ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಳು. ಇದನ್ನು ತಿಳಿದ ಸ್ನೇಹಿತರು ಹಾಗೂ ಸಂಬಂಧಿಕರು ಕುಮಾರ್‌ನನ್ನು ಪ್ರಶ್ನಿಸಿದ್ದರು. ಇದರಿಂದ ಮನನೊಂದ ಕುಮಾರ್ ಫೆ.14ರಂದು ತಡರಾತ್ರಿ ಮನೆಯ ಹಿಂಭಾಗದ ಮರವೊಂದಕ್ಕೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು ಎನ್ನಲಾಗಿತ್ತು. ಆದರೆ ಪತ್ನಿಯ ಹೇಳಿಕೆಯಿಂದ ಹೊಸ ತಿರುವುದ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net