ಫಲಕಕ್ಕೆ ಸೀಮಿತ ಹುರಳಿಕುಪ್ಪಿ ಪಿಎಚ್‌ಸಿ

Hurlikuppi PHC limited for name plate
Published on

ಸವಣೂರ: ತಾಲೂಕಿನ ಹುರುಳಿಕುಪ್ಪಿ ಗ್ರಾಮದ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಮೀನಮೇಷ ಎಣಿಸುತ್ತಿದ್ದು, ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆ ದೊರೆಯದಾಗಿದೆ.

ಗ್ರಾಮದಲ್ಲಿ 2018ರಲ್ಲಿ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಆರಂಭಿಸಲಾಗಿತ್ತು. ಇದಕ್ಕೆ ಸುಸಜ್ಜಿತ ಕಟ್ಟಡ ಮಾತ್ರ ನಿರ್ಮಿಸಿ ಕೈತೊಳೆದುಕೊಂಡ ಆರೋಗ್ಯ ಇಲಾಖೆ, ಅವಶ್ಯವಿರುವ ಸಿಬ್ಬಂದಿ ಹಾಗೂ ಮೂಲಸೌಕರ್ಯ ಕಲ್ಪಿಸಲಿಲ್ಲ. ಇದರ ಮಧ್ಯೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಪ್ರಾಥಮಿಕ ಆರೋಗ್ಯ (ಪಿಎಚ್‌ಸಿ) ಕೇಂದ್ರವಾಗಿಸುವುದಾಗಿ ಘೋಷಿಸಿದ್ದರು. ಅದರಂತೆ 2022ರ ಸೆಪ್ಟೆಂಬರ್ 20ರಂದು ಆದೇಶವಾಗಿದೆ. ಮುಖ್ಯ ಕಟ್ಟಡಕ್ಕೆ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರ ಎಂಬ ಫಲಕ ಅಳಡಿಸಲಾಗಿದೆ. ಆದರೆ, ಅದಕ್ಕೆ ತಕ್ಕಂತೆ ಆರೋಗ್ಯ ಸೇವೆ ಮಾತ್ರ ಮರೀಚಿಕೆಯಾಗಿದೆ.

ಹುರಳಿಕುಪ್ಪಿ, ತೊಂಡೂರ, ಹೊಸಳ್ಳಿ, ತಳ್ಳಿಹಳ್ಳಿ, ಕುರುಬರಮಲ್ಲೂರ, ಮನ್ನಂಗಿ, ಮೆಳ್ಳಾಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳ 20 ಸಾವಿರಕ್ಕೂ ಹೆಚ್ಚು ಸಾರ್ವಜನಿಕರಿಗೆ ಹುರಳಿಕುಪ್ಪಿ ಗ್ರಾಮದ ಆರೋಗ್ಯ ಕೇಂದ್ರದ ಸೇವೆ ಅವಶ್ಯವಾಗಿದೆ.

ಆರೋಗ್ಯ ಕೇಂದ್ರಕ್ಕೆ ವೈದ್ಯರು 2, ಸ್ಟಾಫ್‌ನರ್ಸ್ 2, ಡಿ ಗ್ರುಪ್ 2, ಫಾರ್ಮಾಸಿಷ್ಟ್ 1 ಹಾಗೂ ಒಬ್ಬರು ಲ್ಯಾಬ್ ಟೆಕ್ನಿಷಿಯನ್ ಅವಶ್ಯವಾಗಿದೆ. ಆದರೆ, ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ತಲಾ ಒಬ್ಬರು ವೈದ್ಯ, ಸ್ಟಾಫ್‌ನರ್ಸ್, ಗ್ರುಪ್ ಡಿ ಸಿಬ್ಬಂದಿ ಇದ್ದಾರೆ. ಪ್ರತಿದಿನ 50ಕ್ಕೂ ಹೆಚ್ಚು ಹೊರರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ, ಕೇಂದ್ರದಲ್ಲಿ ಅಗತ್ಯ ಸಿಬ್ಬಂದಿ, ಸೌಕರ್ಯ ಇಲ್ಲ. ಹೀಗಾಗಿ, ರೋಗಿಗಳು ಸವಣೂರ ಇಲ್ಲವೇ ಹಾವೇರಿಗೆ ತೆರಳುವುದು ಅನಿವಾರ್ಯವಾಗಿದೆ.

ಆರೋಗ್ಯ ಕೇಂದ್ರದ ಸುಮಾರು 2 ಎಕರೆ ನಿವೇಶನ ಸಂಪೂರ್ಣ ಒತ್ತುವರಿಯಾಗಿ, ಕೇವಲ ಕಟ್ಟಡ ಜಾಗಕ್ಕೆ ಸೀಮಿತವಾಗುತ್ತಿದೆ. ಕೇಂದ್ರಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲ, ಚರಂಡಿ ಇಲ್ಲ, ಕೇಂದ್ರದಲ್ಲಿ ಕುಡಿಯಲು ಹಾಗೂ ಬಳಕೆಗೆ ನೀರು ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮಕ್ಕೆ ಪಿಎಚ್‌ಸಿ ಕೇಂದ್ರ ನೀಡಬೇಕು ಎಂಬ ನಿರಂತರ ಹೋರಾಟದಿಂದಾಗಿ ಜನಪ್ರತಿನಿಧಿಗಳು ಆದೇಶ ಮಾಡಿ ಜಾರಿಕೊಂಡರು. ಆದರೆ, ಪಿಎಚ್‌ಸಿಯಾಗಿ ಮೇಲ್ದರ್ಜೆಗೇರಲಿಲ್ಲ. ಜನರ ಬೇಡಿಕೆಯಂತೆ ಕೇಂದ್ರ ಕಾರ್ಯನಿರ್ವಹಿಸಲು ವಿವಿಧ ಸಂಘಟನೆಗಳ ಸಹಕಾರದಿಂದ ಹೋರಾಟ ಕೈಗೊಳ್ಳಲಾಗುವುದು.ಪ್ರಕಾಶ ಬಾರ್ಕಿ, ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾಧ್ಯಕ್ಷ ಸವಣೂರ ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿರುವ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ವನ್ನಾಗಿಸಲು ಹಿಂದಿನ ಸರ್ಕಾರ ಆದೇಶ ನೀಡಿತ್ತು. ಸದ್ಯ ಪರಿಶೀಲನೆ ಹಂತದಲ್ಲಿದೆ. ಗ್ರಾಮ ಆರೋಗ್ಯ ಕೇಂದ್ರದಲ್ಲಿರುವ ಸಿಬ್ಬಂದಿ ಯಾವುದೇ ತೊಂದರೆ ಇಲ್ಲದಂತೆ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದಾರೆ. ಡಾ. ಚಂದ್ರಕಲಾ ಜೆ., ಟಿಎಚ್‌ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net