ಹುರಕಡ್ಲಿ ಅಜ್ಜನವರ ಪುಣ್ಯಸ್ಮರಣೋತ್ಸವ,ನವಲಗುಂದದಲ್ಲಿ ಧಾರ್ಮಿಕ ಆಚರಣೆಗಳು

IMG-20231227-WA0027.jpg
Published on

ಹುಬ್ಬಳ್ಳಿ: ನವಲಗುಂದದ ಶ್ರೀ ಹುರಕಡ್ಲಿ ಅಜ್ಜನವರ ಪುಣ್ಯಾಶ್ರಮದಲ್ಲಿ ಶ್ರೀ ಹುರಕಡ್ಲಿ ಅಜ್ಜನವರ 34ನೇ ಪುಣ್ಯ ಸ್ಮರಣೋತ್ಸವ ಹಾಗೂ ಶಾಲಾ ಕಟ್ಟಡದ ಮೊದಲ ಮಹಡಿ ಉದ್ಘಾಟನೆ ಹಿನ್ನೆಲೆಯಲ್ಲಿ ಧಾರ್ಮಿಕ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಶ್ರಮದಲ್ಲಿ ಆಯೋಜಿಸಲಾಗಿದೆ.

ಜನೆವರಿ 2ರಂದು ಮಧ್ಯಾಹ್ನ 3.30ಕ್ಕೆ ಶಾಲಾ ದಶಮಾನೋತ್ಸವ ಲಾಂಛನ ಬಿಡುಗಡೆ ಮಾಡಲಾಗುತ್ತಿದ್ದು, ಗದಗ ಆದಿಶಕ್ತಿ ನಗರದ ಶಿವಶರಣೆ ಡಾ. ನೀಲಮ್ಮತಾಯಿ ಅಸುಂಡಿ ಅವರು ಸಾನ್ನಿಧ್ಯ ವವಹಿಸುವರು. ಶಾಸಕ ಎನ್.ಎಚ್. ಕೋನರಡ್ಡಿ ಅಧ್ಯಕ್ಷತೆ ವಹಿಸುವರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಮಾಜಿ ಸಚಿವ ಕೆ.ಎನ್. ಗಡ್ಡಿ ಅತಿಥಿಗಳಾಗಿ ಪಾಲ್ಗೊಳ್ಳುವರು. ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ.ಆರ್. ಹುಲನಾಯ್ಕರ್ ಅವರಿಗೆ ಸನ್ಮಾನಿಸಲಾಗುವುದು.

ಕನ್ನಡ ಮತ್ತು ಸಾಂಸತಿಕ ಇಲಾಖೆ ಸಹಯೋಗದೊಂದಿಗೆ ಸಂಜೆ 6ಕ್ಕೆ ಹುರಕಡ್ಲಿ ಅಜ್ಜನವರ ಪಲ್ಲಕ್ಕಿ ಉತ್ಸವ ಮಂಗಳವಾದ್ಯಗಳೊಂದಿಗೆ ನಡೆಯಲಿದೆ.

ಕೋಲಾಟ, ಗೊಂಬೆಕುಣಿತ, ಕರಡಿ ಮಜಲು, ಸುಮಂಗಲೆಯರ ಆರತಿಯೊಂದಿಗೆ ಉತ್ಸವವು ವಿಜೃಂಭಣೆಯಿಂದ ಜರುಗುವುದು. ನಂತರ ಮುತೆದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಭಕ್ತರಿಗೆ ಪ್ರಸಾದ ವಿತರಣೆಯಾಗಲಿದೆ.

ರಾತ್ರಿ 11ರಿಂದ ಶಲವಡಿಯ ಶ್ರೀ ಕಪಲೇಶ್ವರ ಭಜನಾ ಸಂ ಹಾಗೂ ನವಲಗುಂದದ ಭಜನಾ ಮೇಳಗಳಿಂದ ಭಜನೆ ನಡೆಯಲಿದೆ.

ಜನೆವರಿ 3ರಂದು ಬೆಳಗ್ಗೆ 11ಕ್ಕೆ ಏರ್ಪಡಿಸಿರುವ ಶ್ರೀ ಹುರಕಡ್ಲಿ ಅಜ್ಜನವರ 34ನೇ ಪುಣ್ಯ ಸ್ಮರಣೋತ್ಸವದ ಸಾನ್ನಿಧ್ಯವನ್ನು ಹೂವಿನಹಡಗಲಿ ಗವಿಮಠದ ಡಾ. ಹಿರಿಯ ಶಾಂತವೀರ ಸ್ವಾಮೀಜಿ ವಹಿಸುವರು. ಕೇಂದ್ರದ ಮಾಜಿ ಸಚಿವ ರಮೇಶ ಜಿಗಜಿಣಗಿ ಅಧ್ಯಕ್ಷತೆ ವಹಿಸುವರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅತಿಥಿಗಳಾಗಿ ಪಾಲ್ಗೊಳ್ಳುವರು.

ನಿವೃತ್ತ ಜಂಟಿ ಕಾರ್ಮಿಕ ಆಯುಕ್ತ ಶ್ರೀನಿವಾಸ ಗುರುರಾವ ದೇಶಪಾಂಡೆ ಹಾಗೂ ಮಹಾದಾನಿಗಳಿಗೆ ಸನ್ಮಾನ ಮಾಡಲಾಗುವುದು.

ಶ್ರೀ ಹುರಕಡ್ಲಿ ಅಜ್ಜನವರು ತಮ್ಮ ಅಮೋ ತಪೋಬಲದಿಂದ ಭಕ್ತರ ನೋವು& ನಲಿವುಗಳನ್ನು ಆಲಿಸಿ ಅವರಿಗೆ ಕೃಪಾಶೀರ್ವಾದ ಗೈದ ಕರುಣಾಮಯಿ ಆಗಿದ್ದಾರೆ. ಅವರ ಜೀವನ ನಮ್ಮ ಬದುಕಿಗೆ ಬೆಳಕಿನ ದೀಪದಂತೆ ಮಾರ್ಗದರ್ಶನ ನೀಡುತ್ತಿದೆ. ಅವರ ಕೃಪಾಶೀರ್ವಾದದಿಂದ ಜೀವನದ ನಿಲುವು ಕಂಡುಕೊಂಡವರು ಅನೇಕರು. ಸ್ತ್ರೀ ಕುಲವನ್ನು ತಾಯಿಯಂದೇ ನಂಬಿ ಗೌರವ ನೀಡಿದವರು. ಇಂತಹ ಅಜ್ಜನವರ ಪುಣ್ಯಾಶ್ರಮದಲ್ಲಿ ಅವರ ಕೃಪೆಯಿಂದ ಹಲವು ಪುಣ್ಯ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ.

ಧಾರ್ಮಿಕ ಕಾರ್ಯಕ್ರಮ: ಹುರಕಡ್ಲಿ ಅಜ್ಜನವರ ಮಂದಿರದಲ್ಲಿ ಡಿ. 30ರಂದು ಸಂಜೆ 6ಕ್ಕೆ ಗಣಪತಿ ಪೂಜೆ, ಪುಣ್ಯಾಹ, ವಾಸ್ತು ಹೋಮ, ರಾೋ ಹೋಮ, ಕಲಶಸ್ಥಾಪನೆ ಪೂಜೆ ನಡೆಯಲಿದೆ. ಡಿ. 31ರಂದು ಬೆಳಗ್ಗೆ 8.30ಕ್ಕೆ ಕುಂಭಾಭಿಷೇಕ, ರುದ್ರಹವನ, ಕಲಾಭಿವೃದ್ಧಿ ಹೋಮ, ಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಲಿದೆ.

ಶಿರಸಿಯ ಶ್ರೀ ಸ್ವರ್ಣವಲ್ಲಿ ಸೋಂದಾ ಮಹಾಸಂಸ್ಥಾನದ ನಿವೃತ್ತ ಉಪನ್ಯಾಸಕರಾದ ಡಾ. ಶಂಕರ ಭಟ್ ಜಾಲಿಗದ್ದೆ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net