ತರಾತುರಿಯಲ್ಲಿ ಮೆಟ್ಲಿಂಗ್ ರಸ್ತೆ ನಿರ್ಮಾಣ

13 HANUR 1 C
Published on

ಹನೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸುವ ಒಂದೂವರೆ ಗಂಟೆ ಮುನ್ನಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಕೆಸರು ಗದ್ದೆಯಂತಾಗಿದ್ದ ರಸ್ತೆಯನ್ನು ಪಿಡಬ್ಲುೃಡಿ ಇಲಾಖೆಯ ಅಧಿಕಾರಿಗಳು ತರಾತುರಿಯಲ್ಲಿ ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲು ಹಾಕಿ ಮೆಟ್ಲಿಂಗ್ ರಸ್ತೆ ನಿರ್ಮಿಸಿದರು.


ಕಳೆದ 2 ದಿನಗಳಿಂದ ಸುರಿದ ಮಳೆಗೆ ಕಾರ್ಯಕ್ರಮ ಆಯೋಜಿಸಿರುವ ಕ್ರೀಡಾಂಗಣದ ಪ್ರವೇಶ ದ್ವಾರದಿಂದ ವೇದಿಕೆವರೆಗೆ ಹಾಗೂ ವೇದಿಕೆಯ ಆಸುಪಾಸು ಕೆಸರುಗದ್ದೆಯಂತಾಗಿತ್ತು. ಈ ಹಿನ್ನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೋಮವಾರ ಅಧಿಕಾರಿಗಳಿಗೆ ಕೂಡಲೇ ಅಗತ್ಯ ಕ್ರಮಕೈಗೊಂಡು ಸಮತಟ್ಟು ಮಾಡುವಂತೆ ಸೂಚನೆ ನೀಡಿದ್ದರು. ಈ ದಿಸೆಯಲ್ಲಿ ಮಣ್ಣು ಸುರಿದು ಸಮತಟ್ಟು ಮಾಡಲಾಗಿತ್ತು. ಆದಾಗ್ಯೂ ಮಂಗಳವಾರ ಬೆಳಗ್ಗೆ ಕೆಸರುಗದ್ದೆಯಂತಾಗಿತ್ತು. ಇದರಿಂದ ಸಿಎಂ ಅಗಮಿಸುವ ವಾಹನಕ್ಕೆ ತೊಡಕಾಗುವ ಮುನ್ಸೂಚನೆ ಅರಿತ ಅಧಿಕಾರಿಗಳು ತರಾತುರಿಯಲ್ಲಿ ಮೆಟ್ಲಿಂಗ್ ರಸ್ತೆ ನಿರ್ಮಿಸಿದರು.


ಪಿಡಬ್ಲುೃಡಿ ಎಇಇಗಳಾದ ರಾಜೇಶ್ ಮುನ್ಸಿ, ಸದಾಶಿವಮೂರ್ತಿ ಹಾಗೂ ಚಿನ್ನಣ್ಣ ರಸ್ತೆ ನಿರ್ಮಿಸಲು ಹರಸಾಹಸಪಟ್ಟರು. ಸಚಿವರ ಸೂಚನೆಯಂತೆ ವೇದಿಕೆ ಮುಂಭಾಗದ ಎರಡು ಬದಿಯಲ್ಲಿ ಹಾಕಲಾಗಿದ್ದ ಸಾಮಾನ್ಯ ಶಾಮಿಯಾನವನ್ನು ಕಳಚಿ, ವಾಟರ್ ಪ್ರೂಫ್ ಶಾಮಿಯಾನ ಅಳವಡಿಸಲಾಯಿತು. ಮಧುವನಹಳ್ಳಿಯಿಂದ ಹನೂರಿನವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಬಹುತೇಕ ಕಡೆಗಳಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಆದರೆ ಕಾಮಗೆರೆ, ಮಂಗಲ, ಆರ್.ಎಸ್.ದೊಡ್ಡಿ ಹಾಗೂ ಇನ್ನಿತರ ಕಡೆಗಳಲ್ಲಿ ರಸ್ತೆ ನಿರ್ಮಿಸಿಲ್ಲ. ಬದಲಾಗಿ ರಸ್ತೆಯನ್ನು ವಿಸ್ತರಿಸಿ ಸಮತಟ್ಟು ಮಾಡಲಾಗಿತ್ತು. ಹೀಗಾಗಿ, ಮಳೆಯಿಂದಾಗಿ ಗುಂಡಿಗಳು ನಿರ್ಮಾಣವಾಗಿದ್ದವು. ಸಿಎಂ ಬಸವರಾಜ ಬೊಮ್ಮಾಯಿ ಅವರು ರಸ್ತೆ ಮೂಲಕ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡಿಸಿದರು.


ಟ್ರಾಫಿಕ್ ಕಿರಿಕಿರಿ: ಕೊಳ್ಳೇಗಾಲ ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಫಲಾನುಭವಿಗಳು ಹಾಗೂ ಜನರನ್ನು ಕರೆತರಲು 2 ತಾಲೂಕಿನಿಂದ ಸುಮಾರು 250ಕ್ಕೂ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿತ್ತು. 11 ಗಂಟೆಯ ಬಳಿಕ ಬಸ್‌ಗಳು ಪಟ್ಟಣಕ್ಕೆ ಆಗಮಿಸಲು ಪ್ರಾರಂಭಿಸಿದವು. ಇದರಿಂದ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ವಾಹನ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಇದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net