ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು

HUN-JAN-4-2(VIDYA VARIDHI SCHOOL PROGRAMME)
Published on

ಹುಣಸೂರು: ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಬಿಳಿಕೆರೆ ಗ್ರಾಮದ ವಿದ್ಯಾವಾರಿಧಿ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ 23ನೇ ಶಾಲಾ ಸಂಭ್ರಮೋತ್ಸವ ಸಮಾರಂಭ ಹಾಗೂ ಹಂದನಹಳ್ಳಿ ದಿ.ಪಟೇಲ್ ಬಸಪ್ಪನವರ ಸ್ಮರಣಾರ್ಥ 20ನೇ ವರ್ಷದ ಜಿಲ್ಲಾ ಮಟ್ಟದ ಜನಪದ ಗೀತೆ ಸ್ಪರ್ಧಾ ವಿಜೇತರಿಗೆ ಪಾರಿತೋಷಕ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಗಳು ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿವೆ. ಇಷ್ಟಾಗಿಯೂ ಗ್ರಾಮೀಣ ಭಾಗಗಳಲ್ಲಿ ಎಲೆಮರೆಕಾಯಿಯಂತೆ ಇರುವ ಪ್ರತಿಭೆಗಳನ್ನು ಗುರುತಿಸುವ ಹೊಣೆಗಾರಿಕೆಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಕೈಗೆತ್ತಿಕೊಂಡು ಯಶಸ್ವಿಯಾಗಿ ನಡೆಸಿವೆ. ವಿದ್ಯಾವಾರಿಧಿ ಶಿಕ್ಷಣ ಸಂಸ್ಥೆಯೂ ಎರಡು ದಶಕಗಳಿಂದ ಇಂತಹ ಮಹತ್ತರ ಕಾರ್ಯ ಕೈಗೊಂಡಿರುವುದು ಸಂತಸ ತಂದಿದೆ ಎಂದರು.
ಸೂರಿಲ್ಲದವರಿಗೆ ಸೂರು: ರಾಜ್ಯ ವಸತಿ ಸಚಿವರಾಗಿ ತಾವು ಜಿಲ್ಲೆಯಾದ್ಯಂತ ಜಾತಿ, ಮತ ಲೆಕ್ಕಿಸದೆ ಸೂರಿಲ್ಲದ ನಿಜವಾದ ಫಲಾನುಭವಿಗೆ ಸೂರು ಒದಗಿಸುವ ಕಾರ್ಯ ನಡೆಸಲಿದ್ದೇನೆ. ಜ.11ರಂದು ಮತ್ತೆ ಸಭೆ ಸೇರಿ ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ. ತಾಲೂಕಿನ ಗಿರಿಜನಹಾಡಿಗಳು, ಪ.ಜಾತಿ/ ಪಂಗಡದ ಸಮುದಾಯಗಳಿಗೆ ಶಿಕ್ಷಣ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸುವತ್ತ ಗಮನಹರಿಸುತ್ತೇನೆ ಎಂದರು.
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಉಸ್ತುವಾರಿ ಸಚಿವರು ನನಗೆ ಗುರುಗಳು. ಅವರ ಮಾರ್ಗದರ್ಶನದಂತೆ ನಾನು ಮುಂದಿನ ಮೂರೂವರೆ ವರ್ಷಗಳ ಕಾಲ ತಾಲೂಕಿನಲ್ಲಿ ಅಬಿವೃದ್ಧಿ ಕಾರ್ಯ ಕೈಗೊಳ್ಳಲಿದ್ದೇನೆ. ತಾಲೂಕಿನಲ್ಲಿ 48 ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೊಳಿಸುವಲ್ಲಿ ಉಸ್ತುವಾರಿ ಸಚಿವರು ನನಗೆ ಸಹಕಾರ ನೀಡಬೇಕೆಂದು ಕೋರಿದರು.
ಜನಪದ ಗೀತೆ ಸ್ಪರ್ಧೆ ವಿಜೇತರಿಗೆ ವಿಧಾನಪರಿಷತ್ ಸದಸ್ಯೆ ತಾರಾ ಬಹುಮಾನ ವಿತರಿಸಿದರು. ಜಿಲ್ಲಾಧಿಕಾರಿ ಅಭಿರಾಂ.ಜಿ.ಶಂಕರ್ ಅವರು ಲೇಖಕಿ ವಿಜಯಶಂಕರ್ ಬರೆದ ‘ಸ್ವರ್ಣಖಡ್ಗ ಮತ್ತು ಖೈದಿ’ ಕೃತಿಗಳನ್ನು ಬಿಡುಗಡೆಗೊಳಿಸಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಚಿವರ ಪತ್ನಿ ಶೈಲಜಾ ಸೋಮಣ್ಣ, ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಬಸಪ್ಪ, ಡಿವೈಎಸ್‌ಪಿ ಸುಂದರರಾಜ್, ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ರಮೇಶ್, ಕಾರ್ಯದರ್ಶಿ ವೀಣಾರಮೇಶ್, ಸೋಮಶೇಖರ್, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net