

ಹುಣಸೂರು : ನಗರದ ಡಿ.ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯಲ್ಲಿ 30 ಮಂದಿ ವೃದ್ಧರಿಗೆ ಆಶಾಕಿರಣ ದೃಷ್ಟಿಕೇಂದ್ರದ ವತಿಯಿಂದ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು. ಆಸ್ಪತ್ರೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿಮಾಂದ್ಯತೆ ನಿಯಂತ್ರಣ ಕಾರ್ಯಕ್ರಮದಡಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡವರಿಗೆ ಉಚಿತವಾಗಿ ಕನ್ನಡಕ ವಿತರಣೆ ಮಾಡುತ್ತಿರುವುದು ಅನುಕೂಲವಾಗಲಿದೆ. 40ರಿಂದ 60 ವರ್ಷ ವಯಸ್ಸಿನವರಿಗೆ ಹಲವು ಆರೋಗ್ಯ ಸಮಸ್ಯೆಗಳಿಂದ ದೃಷ್ಟಿ ದೋಶವೂ ಬರುತ್ತಿದೆ. ಇಂಥವರು ನಿತ್ಯದ ಜೀವನ ಸಾಗಿಸುವುದೂ ಕಷ್ಟಕರವಾಗಲಿದೆ. ಇವರಿಗೆ ಗುಣಮಟ್ಟದ ಕನ್ನಡಕಗಳನ್ನು ಉಚಿತವಾಗಿ ವಿತರಿಸುತ್ತಿರುವುದು ಶ್ಲಾಘನೀಯವೆಂದರು.
ನೇತ್ರ ತಜ್ಞ ಸಂಜಯ್ ಮಾತನಾಡಿ, ಕಳೆದ 2 ತಿಂಗಳಿಂದ 500ಕ್ಕೂ ಹೆಚ್ಚು ಜನ ದೃಷ್ಟಿದೋಷವುಳ್ಳವರಿಗೆ ಕೇಂದ್ರದ ವತಿಯಿಂದ ಕನ್ನಡಕ ವಿತರಿಸಲಾಗಿದೆ. ರೋಗಿಗಳ ಬೇಡಿಕೆಗೆ ತಕ್ಕಂತೆ ಸರ್ಕಾರಕ್ಕೆ ವರದಿ ಮಾಡಿ, ಕನ್ನಡಕಗಳನ್ನು ತರಿಸಿಕೊಂಡು ವಿತರಣೆ ಮಾಡಲಾಗುತ್ತಿದೆ. ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಮುಖಂಡರಾದ ಕಿರಿಜಾಜಿ ಗಜೇಂದ್ರ, ಕಟ್ಟೆಮಳಲವಾಡಿ ಗ್ರಾಮದ ಮಹಿಳೆಯರಾದ ಕಾಳಮ್ಮ, ಜಯಮ್ಮ, ಗಿರಿಜಮ್ಮ, ತಾಯಕ್ಕ, ನಿಂಗಮ್ಮ, ಮರಬಸಮ್ಮ, ಸಣ್ಣಕಮ್ಮ, ಮರಮ್ಮ, ಮಂಚಮ್ಮ, ಲಕ್ಕಮ್ಮ, ಗಂಗಮ್ಮ, ಗೌರಮ್ಮ, ಅಕ್ಕಯ್ಯಮ್ಮ, ಸಣ್ಣಮ್ಮ, ಹೈರಿಗೆ ಕಾಳಕ್ಕ, ಕಲ್ಕುಣಿಕೆ ಗ್ರಾಮದ ಪಾರ್ವತಮ್ಮ, ಮಂಜಮ್ಮ ಇದ್ದರು.