

ಜಮಖಂಡಿ: ಹುನ್ನೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶತಮಾನೋತ್ಸವ 2026ರಲ್ಲಿ ಆಚರಿಸಲಾಗುವುದು ಎಂದು ಶಾಲೆಯ ಹಳೇ ವಿದ್ಯಾರ್ಥಿ ವಿಶ್ವನಾಥ ಶಾಸ್ತ್ರಿಗಳು ಹೇಳಿದರು.
ತಾಲೂಕಿನ ಹುನ್ನೂರು ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ 2003-04 ನೇ ಸಾಲಿನಲ್ಲಿ 7 ನೇ ತರಗತಿ ಪೂರೈಸಿದ ಹಳೇ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ, ಸ್ನೇಹ ಸಮ್ಮಿಲನ, ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹುನ್ನೂರಿನ ಶಾಲೆ ಈಗಾಗಲೇ ಶತಮಾನ ಪೂರೈಸಿದೆ. ನಾಲ್ಕೈದು ವರ್ಷಗಳ ಹಿಂದೆಯೇ ಶತಮಾನೋತ್ಸವ ಆಚರಿಸಲು ನಮ್ಮೂರಿನ ಹಿರಿಯರು ಹಾಗೂ ಹಳೇ ವಿದ್ಯಾರ್ಥಿಗಳು ಸೇರಿಕೊಂಡು ತೀರ್ಮಾನ ಕೈಗೊಂಡಿದ್ದರು. ಶಾಲೆ ಆವರಣದಲ್ಲಿ ಹೊಸ ಕಟ್ಟಡ ನಿರ್ಮಾಣ, ಮತ್ತಿತರ ಕಾರಣಕ್ಕಾಗಿ ಶತಮಾನೋತ್ಸವ ಆಚರಣೆಗೆ ಹಿನ್ನಡೆಯಾಗಿದೆ. 2026ರಲ್ಲಿ ಹಮ್ಮಿಕೊಳ್ಳಲಾಗುವ ಶತಮಾನೋತ್ಸವ ಸಮಾರಂಭಕ್ಕೆ ಹಳೇ ವಿದ್ಯಾರ್ಥಿಗಳೆಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಬೇಕು ಎಂದರು.
ಜಮಖಂಡಿ ಸರ್ಕಾರಿ ಪಿ.ಬಿ. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಲಿಂಗಾನಂದ ಗವಿಮಠ ಮಾತನಾಡಿ, ಹುನ್ನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ. ಇಲ್ಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಶಿಕ್ಷಣ ಜತೆಗೆ ಸಂಸ್ಕಾರವನ್ನೂ ಪಡೆದಿದ್ದಾರೆ ಎನ್ನುವುದಕ್ಕೆ ಹಳೇ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಗುರುವಂದನೆ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಸರ್ಕಾರಿ ಶಾಲೆಗೊಂದು ಸುಸಜ್ಜಿತ ಪ್ರಯೋಗಾಲಯದ ಕೊಡುಗೆ ನೀಡಿರುವ ಹಳೇ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ ಜಕ್ಕನ್ನವರ, ಶಾಲೆ ಶಿಕ್ಷಕರು ಇದ್ದರು. ಲಕ್ಷ್ಮೀ ನಾವಿ, ಶ್ರೀಶೈಲ ಔರಸಂಗ, ಶ್ರೀಶೈಲ ಬಿಳ್ಳೂರ ಅನಿಸಿಕೆ ವ್ಯಕ್ತಪಡಿಸಿದರು.
ನಿವೃತ್ತ ಶಿಕ್ಷಕ ರಂಗಪ್ಪ ಮುನ್ನೊಳ್ಳಿ, ಪಂಡಿತಪ್ಪ ಯಲ್ಲಟ್ಟಿ, ಎಸ್.ಎಂ. ಅಂಬಿ, ಬಿ.ಕೆ.ಪಾಟೀಲ, ಸುಭಾಷ ಹುನ್ನೂರ, ಎಸ್.ಎಂ.ಲೂತಿಮಠ, ಪಿ.ಎಸ್.ರುದ್ರಸ್ವಾಮಿಮಠ, ಎಸ್.ಜಿ.ಬರಡ್ಡಿ, ಶಶಿಕಲಾ ಲಾತೂರ, ಎಂ.ಎ.ಹುಲ್ಯಾಳಕರ, ಕೆ.ಕೆ. ಗೊಂಗಡಿ, ಪಿ.ಎಚ್. ಮೆಟಗುಡ್ಡ, ಎಸ್.ಎಂ. ತೆಳಗಿನಮನಿ, ಎಸ್.ಬಿ. ಮೈಗೂರ, ಆರ್.ಟಿ. ಪೋಶಟ್ಟಿ , ಎಂ.ಆರ್. ಮೊಗಲ್, ಲಕ್ಷ್ಮಿಮಾಳಿ, ಎನ್.ಟಿ.ಬಿದರಿ, ಎಸ್.ಬಿ. ಬೂದಗುಂಪಿ, ಎಂ.ಬಿ.ಪಡಗನ್ನವರ, ಬಿ.ಸಿ.ಹಿಟ್ನಳ್ಳಿ ಅವರನ್ನು ಸನ್ಮಾನಿಸಲಾಯಿತು.
ಕವಿತಾ ತುಪ್ಪದ ಸಂಗಡಿಗರು ಪ್ರಾರ್ಥಿಸಿದರು. ಗೀತಾ ಕೋಲಾರ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಆಶಾ ಹೊಲ್ಲೂರ ಮತ್ತು ಆಶಾ ಮಲ್ಲಣ್ಣವರ ಸ್ವಾಗತಿಸಿದರು. ಮಹಾಂತೇಶ ರೂಢಲಬಂಡಿ ನಿರೂಪಿಸಿದರು.
ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಣ ಪಡೆದ ಬಳಿಕ 17 ವರ್ಷದ ನಂತರ ಗುರುವಂದನೆ ಮತ್ತು ಸ್ನೇಹಸಮ್ಮಿಲನ ನೆಪದಲ್ಲಿ ಒಂದೆಡೆ ಸೇರಿದ ಹಳೇ ವಿದ್ಯಾರ್ಥಿಗಳೆಲ್ಲರೂ ಶಾಲೆ ದಿನಗಳನ್ನು ಮೆಲುಕು ಹಾಕಿ ಸಂಭ್ರಮಿಸಿದರು. ತಮಗೆ ಕಲಿಸಿದ ಗುರುಗಳಿಗೆ ಸಸಿ ನೀಡಿ ಸತ್ಕರಿಸಿ ಗೌರವ ಸಲ್ಲಿಸಿದರು. ವೈಯಕ್ತಿಕವಾಗಿ ಹಣ ಸಂಗ್ರಹಿಸಿ ತಾವು ಕಲಿತ ಶಾಲೆಗೆ ಅಂದಾಜು 1.80ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಪ್ರಯೋಗಾಲಯದ ವ್ಯವಸ್ಥೆ ಕಲ್ಪಿಸಿದ್ದು ಶಿಕ್ಷಣ ಪ್ರೇಮಿಗಳ ಗಮನ ಸೆಳೆಯಿತು.