ವಿಶ್ವ ಮೌಲಿಕ ಆಶಯಗಳನ್ನು ಶರಣರ ವಚನಗಳಲ್ಲಿ ಕಾಣಬಹುದು

hunnime
Published on

ಕುಶಾಲನಗರ:

ಕಾಯಕ ಮಹತ್ವ, ತ್ರಿವಿಧ ದಾಸೋಹ ಪರಿಕಲ್ಪನೆ, ಸಾಮಾಜಿಕ ಸಮಾನತೆ, ಸ್ತ್ರೀ ಸಮಾನತೆ, ದಯೆ ಮತ್ತು ಧರ್ಮದ ಪರಿಕಲ್ಪನೆ, ಅನುಭಾವ, ಸಮ ಸಮಾಜದ ನಿರ್ಮಾಣ ಮೊದಲಾದ ವಿಶ್ವ ಮೌಲಿಕ ಆಶಯಗಳನ್ನು ಶರಣರ ವಚನಗಳಲ್ಲಿ ಕಾಣಬಹುದಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಹೇಳಿದರು. ಕುಶಾಲನಗರ ತಾಲೂಕು ತೊರೆನೂರು ವಿರಕ್ತ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಾಸಿಕ ಪುಣ್ಣಿಮೆ ಪೂಜಾ ಕಾರ್ಯಕ್ರಮ, ಶಿವಾನುಭವ ಗೋಷ್ಠಿ ಮತ್ತು ಫ.ಗು. ಹಳಕಟ್ಟಿಯವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬಸವಾದಿ ಶರಣರು ನಡೆ-ನುಡಿ ಒಂದಾಗಿಸಿಕೊAಡು ಬದುಕಿದವರು. ಕ್ರಿ.ಶ. ಹನ್ನೆರಡನೇ ಶತಮಾನದಲ್ಲಿಯೇ ಕರ್ಮಠತನದ ಸಾಮಾಜಿಕ ವ್ಯವಸ್ಥೆಯ ವರ್ಗ-ಜಾತಿ-ಲಿಂಗ ತಾರತಮ್ಯವನ್ನು ನೇರವಾಗಿ ವಿರೋಧಿಸಿ ಸಮ ಸಮಾಜದ ಮಾನವೀಯ ಮೌಲ್ಯಗಳನ್ನು ಇಡೀ ಜಗತ್ತಿಗೆ ಸಾರಿದರು.

ಜನಪರವಾದ ಮತ್ತು ಲೋಕಕಲ್ಯಾಣಕರವಾದ ಚಿಂತನೆಗಳು ಬಸವಾದಿ ಶರಣರ ವಚನಗಳಲ್ಲಿ ಕಂಡುಬರುತ್ತದೆ.

ವಚನ ಪಿತಾಮಹ, ವಚನ ಕಮ್ಮಟ, ರಾವ್ ಬಹದ್ದೂರ್, ರಾವ್ ಸಾಹೇಬ್ ಎಂದೇ ಪ್ರಸಿದ್ಧರಾಗಿದ್ದ ಫ.ಗು. ಹಳಕಟ್ಟಿಯವರು ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿ ಇಡೀ ತಮ್ಮ ಬದುಕನ್ನು ಶರಣರ ವಚನಗಳನ್ನು ಸಂಗ್ರಹಿಸಿ ಪ್ರಕಟಿಸುವುದಕ್ಕಾಗಿ ಮುಡಿಪಾಗಿಟ್ಟವರು. ತಮ್ಮ ಬದುಕಿನಲ್ಲಿ ಎದುರಾದ ಹಲವಾರು ಕಷ್ಟ ಕಾರ್ಪಣ್ಯದ ಸಂದಿಗ್ಧತೆಯ ಪರಿಸ್ಥಿತಿಗಳ ನಡುವೆಯೂ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಬಸವಾದಿ ಶರಣರ ಸಮಗ್ರ ವಚನಗಳನ್ನು ಕನ್ನಡ ನಾಡಿಗೆ ನೀಡಿದಂತಹ ನಿಸ್ವಾರ್ಥ ಸೇವೆ ಅವರದು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ತಮ್ಮ ವಚನಗಳ ಮೂಲಕ ಅಂತರAಗದ ಆತ್ಮಸಾಕ್ಷಿಯಾಗಿ ಇಡೀ ಮನುಕುಲಕ್ಕೆ ಸಾರ್ಥಕ ಜೀವನದ ದಾರ್ಶನಿಕ ಮೌಲ್ಯಗಳನ್ನು ಸಾರಿದ ಶ್ರೇಯಸ್ಸು ಈ ನಾಡಿನ ಶರಣರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿದ್ದ ತೊರೆನೂರು ವಿರಕ್ತ ಮಠದ ಪೀಠಾಧ್ಯಕ್ಷ ಶ್ರೀ ಮಲ್ಲೇಶ ಸ್ವಾಮಿ ಆಶೀರ್ವಚನ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಕೊಡಗು ಘಟಕದ ಅಧ್ಯಕ್ಷ ಹೆಚ್.ವಿ. ಶಿವಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಪದಾಧಿಕಾರಿಗಳು, ಮಠದ ಭಕ್ತ ಮಂಡಳಿ ಹಾಗೂ ಅಕ್ಕನ ಬಳಗದವರು ಕಾರ್ಯಕ್ರಮದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net