

ತೀರ್ಥಹಳ್ಳಿ: ಬಹುಗ್ರಾಮ ಕುಡಿಯುವ ನೀರು ಯೋಜನೆ ವಿರೋಧಿಸಿ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಹಾಗೂ ರೈತ ಸಂಘದ ಪದಾಧಿಕಾರಿಗಳು ಸೋಮವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್ ಮಾತನಾಡಿ, ಕುಡಿಯುವ ನೀರು ಯೋಜನೆಯಡಿ ಸ್ಥಳೀಯ ನಿಸರ್ಗ, ನೆಲ ದೋಚುವ ಹುನ್ನಾರ ನಡೆದಿದೆ. ಕೇಂದ್ರೀಕೃತ ಕಾರ್ಯಕ್ರಮ ಅನುಷ್ಠಾನದ ನೆಪದಲ್ಲಿ ರಾಜಕಾರಣಿಗಳು ಮತ್ತು ಗುತ್ತಿಗೆದಾರರು ನಡೆಸುತ್ತಿರುವ ಮಾಫಿಯಾಕ್ಕೆ ಅವಕಾಶ ಕೊಡುವುದಿಲ್ಲ ಎಂದು ಗುಡುಗಿದರು.
267 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಯಡಿ ಸಾರ್ವಜನಿಕರು, ಸ್ಥಳೀಯರ ಉದ್ಧಾರ ನಗಣ್ಯ. ಗ್ರಾಮಸ್ಥರಿಗೆ ಮಾಹಿತಿಯೇ ಇಲ್ಲದೆ ಕೇಂದ್ರ, ರಾಜ್ಯ ಸರ್ಕಾರ ಯೋಜನೆಗೆ ಅನುಮತಿ ಕೊಟ್ಟಿದೆ. ಹೋರಾಟಕ್ಕೆ ಯಾವುದೇ ರಾಜಕೀಯ ಬಣ್ಣ ಕಟ್ಟದೆ ಭೀಮನಕಟ್ಟೆ ಪರಿಸರ, ನೆಲ ರಕ್ಷಣೆಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.
ಭೀಮನಕಟ್ಟೆ ಸುತ್ತಮುತ್ತಲಿನ ನಾಲ್ಕೈದು ಗ್ರಾಮದ ರೈತರು, ಕ್ಷೇತ್ರದ ಜನತೆಗೆ ನೀರು ಕೊಡಲು ವಿರೋಧ ವ್ಯಕ್ತಪಡಿಸುತ್ತಿಲ್ಲ. ವಿಕೇಂದ್ರೀಕೃತ ವ್ಯವಸ್ಥೆಯ ಮೂಲಕ ಸ್ಥಳೀಯರಿಗೆ ಅನುಕೂಲವಾಗುವಂತೆ ಯೋಜನೆ ನೀಡಬೇಕೆಂದು ಆಗ್ರಹಿಸುತ್ತೇವೆ. ನದಿಪಾತ್ರದ ಜನರನ್ನು ದಿಕ್ಕು ತಪ್ಪಿಸಿ ಒಡೆದು ಆಳುವ ತಂತ್ರ ಅನುಸರಿಸಲಾಗುತ್ತಿದೆ. ಆಡಳಿತದ ಬಲಾತ್ಕಾರ ನೀತಿ ವಿರೋಧಿಸುತ್ತಿದ್ದೇವೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಮಾಲತಿ, ತುಂಗಾ ನದಿ ಸೇರುವ ಭೀಮೇಶ್ವರ ಸಂಗಮದಲ್ಲಿ ಜಾಕ್‌ವೆಲ್ ಮೂಲಕ ನೀರು ಎತ್ತುವುದು ಮತ್ತು ಸರ್ವೆ ನಂಬರ್ 142ರ ಕೋಡ್ಲು ಗ್ರಾಮದಲ್ಲಿ ಶುದ್ಧೀಕರಣ ಘಟಕ ನಿರ್ಮಾಣಕ್ಕೆ 4 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಸ್ಥಳದಲ್ಲಿದ್ದ 1 ಎಕರೆ ನೆಡುತೋಪನ್ನು ಗುಪ್ತವಾಗಿ ಕಟಾವು ಮಾಡಲಾಗಿದೆ. ಸ್ಥಳೀಯರ ಗಮನಕ್ಕೆ ತಾರದೆ ಭೂಮಿ ಮಂಜೂರು ಮಾಡುವ ಉದ್ದೇಶವಾದರು ಏನು ಎಂದು ರೈತರು ಪ್ರಶ್ನಿಸಿದರು.
ಪ್ರಮುಖರಾದ ವಿನಯ್ ಬಳಗೋಡು, ಸಚಿನ್ ಮೇಲ್ಮಠ, ರಾಘವೇಂದ್ರ ತಲಬಿ, ಭಾಸ್ಕರ್ ಶೆಟ್ಟಿ, ಸುಂದರೇಶ್, ರಾಮಪ್ಪ ಬಾಳೆಕೊಡ್ಲು ಇತರರಿದ್ದರು.