ಕಾಡಂಚಿನ ಜನರ ಒಕ್ಕಲೆಬ್ಬಿಸಲು ಹುನ್ನಾರ

20 HANUR 4
ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿಯಲ್ಲಿ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಲಾಯಿತು. ಬಡಗಲಪುರ ನಾಗೇಂದ್ರ, ಮಹದೇವಪ್ಪ, ಗೌಡೇಗೌಡ, ಅಮ್ಜಾದ್‌ಖಾನ್, ಶೈಲೇಂದ್ರ ಇತರರು ಇದ್ದರು.
Published on

ಹನೂರು: ಅರಣ್ಯ ಇಲಾಖೆ ಕಾಡಂಚಿನ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿರುವುದು ನಿಜಕ್ಕೂ ಖಂಡನೀಯ. ಈ ಬಗ್ಗೆ ಆಕ್ಷೇಪ ವ್ಯಕ್ತವಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.

ತಾಲೂಕಿನ ಗಡಿ ಗ್ರಾಮ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ, ಪುದುಕಾಡು, ಅಪ್ಪುಕಾ ಪಟ್ಟಿ ಹಾಗೂ ಆತೂರು ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಅರಣ್ಯ ಪ್ರದೇಶದಲ್ಲಿ ಖನಿಜ ಸಂಪತ್ತನ್ನು ಹೊರ ತೆಗೆಯಲು ಬಂಡವಾಳಶಾಹಿಗಳಿಗೆ ಅವಕಾಶ ಕಲ್ಪಿಸಿದೆ. ಜತೆಗೆ ಸಂಡೂರಿನಲ್ಲಿ ಜಿಂದಾಲ್ ಕಂಪನಿಗೆ 3,676 ಎಕರೆಯನ್ನು ನೀಡಿದೆ. ಇದರಿಂದ ಅರಣ್ಯ ಸಂಪತ್ತು ಲೂಟಿಯಾಗುತ್ತಿದೆ. ಆದರೆ ಹನೂರು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಹಲವು ದಶಕಗಳಿಂದಲೂ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸುವ ಸಲುವಾಗಿ ಅರಣ್ಯ ಇಲಾಖೆ 2 ಬಾರಿ ನೋಟಿಸ್ ನೀಡಿ ದಬ್ಬಾಳಿಕೆ ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ಮುಗ್ದ ರೈತಾಪಿ ಬಡ ಕುಟುಂಬಗಳು ಬೀದಿಗೆ ಬಿದ್ದಂತಾಗುತ್ತದೆ. ಆದ್ದರಿಂದ ಈ ಕಾರ್ಯವನ್ನು ಕೈ ಬಿಡಬೇಕು. ಈ ಬಗ್ಗೆ ಸ್ಥಳೀಯ ಶಾಸಕರು ಅಧಿಕಾರಿಗಳ ಚರ್ಚಿಸಿ ಇಲ್ಲಿನ ಜನರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದರ ಮೂಲಕ ವಾಸಿಸಲು ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಹನೂರು ತಾಲೂಕಿನಲ್ಲಿ ಬಹುತೇಕ ಗ್ರಾಮಗಳು ಕಾಡಂಚಿನಲ್ಲಿದ್ದು, ಇಲ್ಲಿನ ಜನರು ಮೂಲ ಸೌಕರ್ಯ ಕೊರತೆಯ ನಡುವೆಯೂ ತಲೆತಲಾಂತರದಿಂದ ವಾಸಿಸುತ್ತಿದ್ದಾರೆ. ಕಾಡು ಪ್ರಾಣಿಗಳ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಈಗೀರುವಾಗ ಅರಣ್ಯ ಇಲಾಖೆ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಸಂಚು ರೂಪಿಸಿ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಸಂಘಟನೆ ಖಂಡಿಸುತ್ತದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ಕಾರ್ಯಾಧ್ಯಕ್ಷ ಶೈಲೇಂದ್ರ, ಹನೂರು ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಗೌರವಾಧ್ಯಕ್ಷ ರಾಜಣ್ಣ, ಗುಂಡ್ಲುಪೇಟೆ ಯುವ ಘಟಕಾಧ್ಯಕ್ಷ ಭರತ್, ರೈತ ಮುಖಂಡರಾದ ಪಳನಿಸ್ವಾಮಿ, ತಂಗವೇಲು, ರತ್ನವೇಲು, ವಸಂತ, ಸ್ವಾಮಿ, ಸೂರ್ಯ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net