

ಮೈಸೂರು: ಕೇಂದ್ರ ಸರ್ಕಾರ ಕಾರ್ಮಿಕ ಹಕ್ಕುಗಳನ್ನು ದಮನ ಮಾಡಿದೆ. ಈಗ ಇರುವ ಕಾರ್ಮಿಕರ ಕಲ್ಯಾಣ ಸೌಲಭ್ಯ ತೆಗೆದು ಹಾಕುವ ಹುನ್ನಾರ ನಡೆಸಿದೆ ಎಂದು ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ದೂರಿದೆ.
ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಲ್ಲಿ ನಿರ್ಮಾಣ ವಲಯವನ್ನು ಅತ್ಯಂತ ದುಸ್ಥಿತಿಗೆ ತಳ್ಳಿದೆ. ಇದರಿಂದಾಗಿ ಕೋಟ್ಯಂತರ ಕಟ್ಟಡ ನಿರ್ಮಾಣ ಕಾರ್ಮಿಕರ ಬದುಕು ಚಿಂತಾಜನಕವಾಗಿದೆ. ಹೀಗಾಗಿ, ಈ ಸಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಕೂಟದ ವಿರುದ್ಧ ಮತ ಚಲಾಯಿಸಬೇಕು ಎಂದು ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೋದಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕರ ಜೀವನ, ಜೀವನೋಪಾಯದ ಮೇಲೆ ವ್ಯವಸ್ಥಿತ ದಾಳಿ ಮಾಡಿ, ದೇಶದ ದುಡಿಯುವ ಜನರಿಗೆ ದ್ರೋಹ ಮಾಡಲಾಗಿದೆ. ಈ ಸರ್ಕಾರದ ನೀತಿಗಳು ಬೃಹತ್ ಉದ್ಯೋಗ ನಷ್ಟಕ್ಕೆ ಕಾರಣವಾಗಿವೆ. ಅಗತ್ಯ ಬೆಲೆ ಏರಿಕೆ, ಬಡತನ, ಹಸಿವುಗಳನ್ನು ಕಟ್ಟಡ ಕಾರ್ಮಿಕರು ಈ ಅವಧಿಯಲ್ಲಿ ಎದುರಿಸಿದ್ದಾರೆ. ನೋಟು ಅಮಾನ್ಯೀಕರಣ, ಜಿಎಸ್‌ಟಿಗಳಿಂದಾಗಿ ನಿರ್ಮಾಣ ವಲಯದ ಎಲ್ಲ ಸಾಮಗ್ರಿಗಳು ಬೆಲೆ ಏರಿಕೆ ಕಂಡಿವೆ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಕಲ್ಯಾಣ ಮಂಡಳಿ ಮತ್ತು ಸೌಲಭ್ಯಗಳು ರದ್ದಾಗುವ ಅಪಾಯವಿದೆ. ಇದರೊಡನೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ದುರುಪಯೋಗವಾಗಿದೆ ಎಂದು ಆರೋಪಿಸಿದರು.
ನಿರ್ಮಾಣ ಕಂಪನಿಗಳಿಂದ ಬಿಜೆಪಿಗೆ ಸಾವಿರಾರು ಕೋಟಿ ರೂ. ಸಂದಾಯವಾಗಿದೆ. ಚುನಾವಣಾ ಬಾಂಡ್‌ಗಳ ಅತಿ ದೊಡ್ಡ ಫಲಾನುಭವಿ ಬಿಜೆಪಿಯೇ ಆಗಿದೆ ಎಂಬುದು ಬಹಿರಂಗವಾಗಿದೆ ಎಂದು ಹರಿಹಾಯ್ದರು.
ಇತ್ತೀಚೆಗೆ ಇಸ್ರೇಲ್ ಬಿಕ್ಕಟ್ಟು ವೇಳೆ ಅಲ್ಲಿಗೆ ಭಾರತೀಯ ಕಾರ್ಮಿಕರನ್ನು ಕಳುಹಿಸುವ ಒಪ್ಪಂದ ಕೇಂದ್ರ ಮಾಡಿಕೊಂಡಿದ್ದು, ಇವರಿಗೆ ಯಾವುದೇ ಭದ್ರತೆ ಒದಗಿಸಿಲ್ಲ. ಇದೇ ವೇಳೆ ದೇಶದ ಸೌಹಾರ್ದತೆಗೆ ಅಪಾಯ ಎದುರಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಮತ ಚಲಾಯಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಎಚ್.ಎಂ. ಬಸವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್‌ಕುಮಾರ ಚಿಕ್ಕಬಾಗಿಲು, ಖಜಾಂಚಿ ಸೋಮಶಂಕರ್, ಕೃಷ್ಣ ನರಸೀಪುರ, ಮಹದೇವಸ್ವಾಮಿ ಇದ್ದರು.