

ಲಕ್ಕೂರು: ಪ್ರಸಿದ್ಧ ಯಾತ್ರಾ ಸ್ಥಳವಾದ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ಶನಿವಾರ ನಡೆದಿದ್ದು, ಒಟ್ಟು 69.82 ಲಕ್ಷ ರೂಪಾಯಿ ಸಂಗ್ರಹವಾಗಿದೆ.
ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ 3 ಹುಂಡಿಗಳನ್ನು ಜಿಲ್ಲಾ ಮುಜರಾಯಿ ತಹಸೀಲ್ದಾರ್ ನಾಗವೇಣಿ, ತಹಸೀಲ್ದಾರ್ ಎಂ.ಮಂಜುನಾಥ್ ನೇತೃತ್ವದಲ್ಲಿ ತೆರೆದು ಎಣಿಕೆ ಮಾಡಲಾಯಿತು.
2020ನೇ ವಾರ್ಷಿಕ ಸಾಲಿನ ಮಾರ್ಚ್ ತಿಂಗಳಲ್ಲಿ ಎಣಿಕೆ ಮಾಡಬೇಕಿತ್ತು. ಆದರೆ ಕರೊನಾ ಹಿನ್ನೆಲೆಯಲ್ಲಿ ದೇವಾಲಯ ಬಂದ್ ಮಾಡಲಾಗಿತ್ತು. ಈ ಅವಧಿಯಲ್ಲಿ ನಡೆಯಬೇಕಿದ್ದ ಬ್ರಹ್ಮರಥೋತ್ಸವ, ವಿಶೇಷ ಪೂಜೆ, ಹಬ್ಬ, ಶ್ರಾವಣ ಮಾಸ ಮುಂತಾದ ವಿಶೇಷ ದಿನಗಳಲ್ಲಿ ದೇವಾಲಯವನ್ನು ಬಂದ್ ಮಾಡಿದ್ದರಿಂದ 8 ತಿಂಗಳ ನಂತರ ಹುಂಡಿ ಎಣಿಕೆ ಮಾಡಲಾಯಿತು.
ಎಣಿಕೆಯಲ್ಲಿ ಒಟ್ಟು 69,82,402 ರೂ, 72 ಗ್ರಾಂ ಚಿನ್ನ, 581 ಗ್ರಾಂ ಬೆಳ್ಳಿ ಸಂಗ್ರಹವಾಗಿದ್ದು, ಹಳೆಯ 1 ಸಾವಿರ ಮುಖಬೆಲೆಯ 5 ನೋಟುಗಳು, 500 ರೂ.ಗಳ 34 ನೋಟು ಸೇರಿ ಹಲವು ಹರಕೆ ಪತ್ರ ದೊರೆತಿವೆ. ಎಣಿಕೆ ಮುಗಿದ ನಂತರ ಹಣವನ್ನು ಬ್ಯಾಂಕ್‌ಗೆ ಜಮಾ ಮಾಡಲಾಯಿತು. ಸಿಸಿ ಕ್ಯಾಮರಾ ಮೂಲಕ ಎಣಿಕೆ ಕಾರ್ಯ ಚಿತ್ರೀಕರಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಸದಸ್ಯರು, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ದೇವಾಲಯದ ಸಿಬ್ಬಂದಿ ಭಾಗಿಯಾಗಿದ್ದರು. ದೇವಾಲಯ ಕಾರ್ಯನಿರ್ವಹಣಾಧಿಕಾರಿ ಟಿ.ಎನ್.ಮಂಜುಳಾ, ಉಪತಹಸೀಲ್ದಾರ್ ಕೆ.ಎಂ.ಅನಿಲ್‌ಗಾಂಧಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಂದನ್.ವಿ.ಗೌಡ, ಸದಸ್ಯರಾದ ಎಂ.ವೀರಭದ್ರಪ್ಪ, ಟಿ.ಆರ್.ವೆಂಕಟೇಶ್‌ಗೌಡ, ಕಲ್ಪನಾ, ಲಕ್ಷ್ಮಮ್ಮ, ಬ್ಯಾಂಕ್ ವ್ಯವಸ್ಥಾಪಕ ರಮೇಶ್, ಲಕ್ಕೂರು ಠಾಣೆ ಆರಕ್ಷಕರಾದ ನಾಗರಾಜ್, ನಾಗಭೂಷಣ್ ಇತರರು ಇದ್ದರು.