

ಬೆಂಗಳೂರು: ಲಾಕ್ಡೌನ್ ಆದೇಶದಿಂದ ಹೋಟೆಲ್, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಬೀದಿ ನಾಯಿಗಳಿಗೆ ಆಹಾರ ಸಿಗುತ್ತಿಲ್ಲ. ಹಸಿವಿನಿಂದ ಕಂಗೆಟ್ಟಿರುವ ಬೀದಿನಾಯಿಗಳು ದಾರಿಯಲ್ಲಿ ಹೋಗುವ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟಾರೆ 3.09 ಲಕ್ಷ ಬೀದಿ ನಾಯಿಗಳಿರುವುದಾಗಿ ಪಾಲಿಕೆ ಸಮೀಕ್ಷೆ ವರದಿಯಲ್ಲಿ ಉಲ್ಲೇಖಿಸಿದೆ. ಪ್ರತಿನಿತ್ಯ ಬೀದಿಬದಿ ವ್ಯಾಪಾರಿಗಳು, ಹೋಟೆಲ್ಗಳು, ಅಂಗಡಿ ಮುಂಗಟ್ಟುಗಳು, ಹಾಸ್ಟೆಲ್ಗಳ ಬಳಿ ಆಹಾರ ಪಡೆಯುತ್ತಿದ್ದ ನಾಯಿಗಳು ಈಗ ಅವುಗಳೆಲ್ಲ ಮುಚ್ಚಿರುವುದರಿಂದ ಆಹಾರ ಸಿಗದೆ ಕಂಗಾಲಾಗಿ ದಾರಿಹೋಕರ ಮೇಲೆ ದಾಳಿ ಮಾಡುತ್ತಿವೆ. ಇದರಿಂದಾಗಿ ಅಗತ್ಯ ಸೇವೆ ನೀಡುವ ಸರ್ಕಾರಿ ನೌಕರರು, ಸಂಘ ಸಂಸ್ಥೆಗಳ ಸದಸ್ಯರು ಮತ್ತು ಪೊಲೀಸರು ನಾಯಿಗಳಿಗೆ ಹೆದರುವಂತಾಗಿದೆ.
ಆಹಾರದ ಮೂಲಗಳೇ ಇಲ್ಲ: ನಾಯಿಗಳಿಗೆ ಪ್ರಾಣಿ ಪ್ರಿಯರು, ವಾಯುವಿಹಾರಿಗಳು, ವ್ಯಾಪಾರಿಗಳು, ಕಾರ್ಖಾನೆ ಉದ್ಯೋಗಿಗಳು ಆಹಾರ ಕೊಡುತ್ತಿದ್ದರು. ಆದರೆ, ಲಾಕ್ಡೌನ್ ಕಾರಣ ಇವರೆಲ್ಲರೂ ಮನೆಯಿಂದ ಹೊರಬಾರದ ಕಾರಣ ನಾಯಿಗಳಿಗೆ ಆಹಾರದ ಕೊರತೆ ಎದುರಾಗಿದೆ. ಲಕ್ಷಾಂತರ ಕೂಲಿ ಕಾರ್ವಿುಕರು, ಬಡಜನರು, ನಿರಾಶ್ರಿತರಿಗೆ ದಾನಿಗಳು ಊಟ ಕೊಡುತ್ತಾರೆ. ಆದರೆ ಹೋಟೆಲ್ಗಳು, ಸಣ್ಣ ಅಂಗಡಿಗಳ ತ್ಯಾಜ್ಯ ಹಾಗೂ ಬೀದಿಯ ಕಸದ ರಾಶಿಯಲ್ಲೇ ಆಹಾರ ಅರಸುತ್ತಿದ್ದ ಲಕ್ಷಾಂತರ ನಾಯಿಗಳು, ಈಗ ಹಸಿವಿನಿಂದ ಪರಿತಪಿಸುತ್ತಿವೆ.
ಎನ್ಜಿಒ ಕೊಡುವ ಆಹಾರ ಸಾಲುತ್ತಿಲ್ಲ ಬಿಬಿಎಂಪಿಯಲ್ಲಿ ನೋಂದಣಿ ಮಾಡಿಸಿರುವ ಅನಿಮಲ್ ರೈಟ್ಸ್ ಫಂಡ್, ಕ್ಯೂಪಾ, ಕೃಪಾ, ಕರುಣಾ ಸೇರಿ ಹಲವು ಖಾಸಗಿ ಸಂಸ್ಥೆಗಳು ಬೀದಿನಾಯಿಗಳಿಗೆ ಆಹಾರ ಹಾಕಲು ಮುಂದಾಗಿವೆ. ಜತೆಗೆ ನೂರಾರು ಪ್ರಾಣಿಪ್ರಿಯರು ಸಹ ಈ ಕಾರ್ಯಕ್ಕೆ ಅಣಿಯಾಗಿದ್ದಾರೆ. ಆದರೆ, ಇವರೆಲ್ಲರ ಪರಿಶ್ರಮದ ಹೊರತಾಗಿಯೂ ಬೀದಿನಾಯಿಗಳ ಹಸಿವು ನೀಗಿಸಲು ಸಾಧ್ಯವಾಗುತ್ತಿಲ್ಲ.
ಮಾಂಸದಂಗಡಿ ಬಳಿ ನಾಯಿಗಳ ದಾಳಿ
ಮಾಂಸದ ಅಂಗಡಿಗಳ ಮುಂದೆ ಆಹಾರಕ್ಕಾಗಿ ಕಾಯುತ್ತಿದ್ದ ಹಾಗೂ ಬ್ಲಾಕ್ ಸ್ಪಾಟ್(ಕಸದ ರಾಶಿ)ಗಳ ಬಳಿ ಆಹಾರ ಹುಡುಕುತ್ತಿದ್ದ ನಾಯಿಗಳು ರಸ್ತೆಯಲ್ಲಿ ಸಂಚಾರ ಮಾಡುವವರ ಮೇಲೆ ಹೆಚ್ಚಾಗಿ ದಾಳಿ ಮಾಡುತ್ತಿವೆ. ಇತ್ತ ಮನೆಯಿಂದ ಅಗತ್ಯ ಸಾಮಗ್ರಿ ಖರೀದಿಗೆ ಬಂದವರೂ ದಾಳಿಗೆ ತುತ್ತಾಗುತ್ತಿದ್ದು, ಆಹಾರ ಒದಗಿಸಲು ಪಶು ಸಂಗೋಪನೆ ಇಲಾಖೆ, ಪ್ರಾಣಿ ದಯಾ ಮಂಡಳಿ ಸಮಿತಿ ಹಾಗೂ ಬಿಬಿಎಂಪಿ ವ್ಯವಸ್ಥೆ ಮಾಡಬೇಕಿದೆ.
ಸತೀಶ್ ಕೆ.ಬಳ್ಳಾರಿ