

ಮಂಡ್ಯ: ಜಾನುವಾರುಗಳಿಗೆ ಕುಡಿಯಲು ಹಾಗೂ ಜೀವಸಂಕುಲದ ಉಳಿವಿಗಾಗಿ ಕೆರೆಕಟ್ಟೆಗಳಿಗೆ ನೀರು ಹರಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಿಜೆಪಿ ಮುಖಂಡ ಚಂದಗಾಲು ಶಿವಣ್ಣ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಗರದ ಸರ್ ಎಂ ವಿ ಪ್ರತಿಮೆ ಎದುರು ಉಪವಾಸ ನಿರತರಾಗಿದ್ದು ಕೃಷ್ಣರಾಜಸಾಗರ ಜಲಾಶಯದಿಂದ ಕೆರೆಕಟ್ಟೆಗಳಿಗೆ ನೀರು ಹರಿಸಿ ಜೀವಸಂಕುಲ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಮಳೆ ಅಭಾವ ಮತ್ತು ಭೀಕರ ಬರಗಾಲದಿಂದ ನೀರಿನ ಕೊರತೆ ಎದುರಾಗಿದ್ದು,ಕೆರೆಕಟ್ಟೆಗಳೆಲ್ಲ ನೀರಿಲ್ಲದೆ ಒಣಗಿವೆ, ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಹ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಮ್ಮ ನೀರು ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದ್ದರು,ಇದೀಗ ಅವರೇ ಜಲಸಂಪನ್ಮೂಲ ಸಚಿವರಾಗಿದ್ದಾರೆ, ಆದರೂ ಸಹ ನಾಲೆ ಮತ್ತು ಕೆರೆಕಟ್ಟೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಮೌನವಹಿಸಿದ್ದಾರೆ ಎನ್ನುವ ಆಕ್ರೋಶ ವ್ಯಕ್ತಪಡಿಸಿದರು.
ನೀರಿನ ಹಾಹಾಕಾರ ಹೆಚ್ಚಾಗಿದ್ದು, ಇಂತಹ ಪರಿಸ್ಥಿತಿಯಿಂದ ಜಾನುವಾರು ಮತ್ತು ಪಕ್ಷಿ ಸಂಕುಲ ಕುಡಿಯಲು ನೀರಿಲ್ಲದೆ ಸಾವನ್ನಪ್ಪುವ ಪರಿಸ್ಥಿತಿ ಎದುರಾಗಿದೆದಿನೇ ದಿನೇ ಪರಿಸ್ಥಿತಿ ಕೈ ಮೀರುತಿದೆ ಎಂದರು. ಕಾವೇರಿ ಕೊಳ್ಳದ ಜಲಾಶಯಗಳಿಂದ ನಿರಂತರವಾಗಿ ತಮಿಳುನಾಡಿಗೆ ನೀರು ಬಿಟ್ಟು ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ, ಈಗ ನಾಲೆ ಮತ್ತು ಕೆರೆ ಕಟ್ಟೆಗಳಿಗೆ ನೀರು ಹರಿಸಿ ಎಂದರೆ ನೀರು ಇಲ್ಲ ಎಂದು ಸಬೂಬು ಹೇಳಲಾಗುತ್ತಿದೆ,ಆಳುವ ಸರ್ಕಾರದ ಧೋರಣೆಯಿಂದ ಕರ್ನಾಟಕದ ನೀರು ತಮಿಳುನಾಡಿನ ಹಕ್ಕಾಗಿದೆ. ಜಲಾಶಯದಿಂದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಜೀವಸಂಕುಲಗಳನ್ನ ಉಳಿಸಿ. ಇಲ್ಲದಿದ್ದರೆ ಮತ ಕೇಳಲು ಮನೆ ಬಳಿ ಹೋದರೆ ಜನತೆ ಬಾಗಿಲು ಹಾಕಿಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿ ಏ.2ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
ನಿರಂತರ ಉಪವಾಸದಿಂದಾಗಿ ಭಾನುವಾರ ಮುಂಜಾನೆ ತೀವ್ರ ಅಸ್ತಸ್ಥಗೊಂಡಿದ್ದರು. ಜತೆಗಿದ್ದವರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಮಿಮ್ಸ್ ವೈದ್ಯರು ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು. ಮಾತ್ರವಲ್ಲದೆ ಹೆಚ್ಚಿನ ಚಿಕಿತ್ಸಗೆಂದು ಮಿಮ್ಸ್‌ಗೆ ಕರೆದ್ಯೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಒಂದು ದಿನ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.