ಅರಣ್ಯ ಅಧಿಕಾರಿ ದೌರ್ಜನ್ಯ ಖಂಡಿಸಿ ಉಪವಾಸ ಸತ್ಯಾಗ್ರಹ

hunger strike
Published on

ಕಡಬ: ಐತ್ತೂರು ಗ್ರಾಮದ ಮೂಜೂರು ಪ್ರಸಾದ್ ಎಂಬುವರ ಮೇಲೆ ಮರ ಕಳ್ಳತನದ ಆರೋಪ ಹೊರಿಸಿ ಅರಣ್ಯ ಸಂಚಾರಿ ದಳದ ಅಧಿಕಾರಿ ಸಂಧ್ಯಾ ನೇತೃತ್ವದ ಅಧಿಕಾರಿಗಳ ತಂಡ ಮಾರ್ಚ್ 2ರ ಮಧ್ಯರಾತ್ರಿ ಮನೆ ಮೇಲೆ ದಾಳಿ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸೋಮವಾರ ಪ್ರಸಾದ್ ಕುಟುಂಬಸ್ಥರು ಕಡಬ ತಾಲೂಕು ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ನೀತಿ ಸಾಮಾಜಿಕ ಸಂಘಟನೆ ಅಧ್ಯಕ್ಷ ಜಯನ್, ಪ್ರಸಾದ್ ಕುಟುಂಬಸ್ಥರು ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ. ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ಧ ದೂರು ದಾಖಲಾಗುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸತ್ಯಾಗ್ರಹ ಆರಂಭಿಸಿರುವ ಕುಟುಂಬಸ್ಥರು ನಿಷ್ಠಾವಂತ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನಾವು ಈ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸಾಯಂಕಾಲ ವೇಳೆಗೆ ಪ್ರಸಾದ್ ಅವರ ತಾಯಿ ಸೀತಮ್ಮ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಸಾಯಂಕಾಲದವರೆಗೂ ಅಧಿಕಾರಿಗಳು ಭೇಟಿ ನೀಡದ ಹಿನ್ನೆಲೆ ಪ್ರತಿಭಟನೆ ಮುಂದುವರಿಸಲಾಗುವುದು. ಪ್ರತಿಭಟನಾ ನಿರತರಿಗೆ ತೊಂದರೆಯಾದಲ್ಲಿ ಅರಣ್ಯ ಇಲಾಖೆ, ಜನಪ್ರತಿನಿಧಿಗಳು, ಪೊಲೀಸ್ ಇಲಾಖೆಯೇ ಹೊಣೆಯಾಗುತ್ತದೆ ಎಂದು ನೀತಿ ತಂಡದ ಜಯನ್ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net