

ಗೋಕರ್ಣ: ಇಲ್ಲಿನ ಪಂಚಾಯಿತಿ ಕಸ ತ್ಯಾಜ್ಯ ಘಟಕದಲ್ಲಿ ಸಂಗ್ರಹಿಸಿದ್ದ ನೂರಾರು ಟನ್ ಕಸ ಭಾನುವಾರ ಸಂಜೆ ಸಂಭವಿಸಿದ ಅಗ್ನಿ ದುರಂತದಲ್ಲಿ ಸುಟ್ಟು ಕರಕಲಾಗಿದೆ.
ಇದನ್ನು ನಂದಿಸಲು ಕುಮಟಾದಿಂದ ಅಗ್ನಿ ಶಾಮಕ ಕರೆಸಲಾಗಿತ್ತು. ಆದರೆ, ಕಸ ಘಟಕ ಪ್ರವೇಶದ ಗೇಟ್ ಕಿರಿದಾಗಿದ್ದರಿಂದ ಅಗ್ನಿಶಾಮಕ ವಾಹನ ಒಳ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಪಂಚಾಯಿತಿ ಸಿಬ್ಬಂದಿ ಮತ್ತು ಕಸ ವಿಲೇವಾರಿ ನಿರ್ವಹಿಸುತ್ತಿರುವವರು ಬೆಂಕಿ ಆರಿಸಲು ಪ್ರಯತ್ನ ಕೈಗೊಂಡರು. ಸೋಮವಾರ ಸಂಜೆಯ ವರೆಗೂ ಪೂರ್ಣವಾಗಿ ಬೆಂಕಿ ಆರಿಸಲು ಸಾಧ್ಯವಾಗಿಲ್ಲ. ಘಟಕದ ಸಮೀಪ ಯಾವುದೇ ಮನೆ ಅಥವಾ ಕಟ್ಟಡ ಇಲ್ಲದೆ ಇರುವುದರಿಂದ ಹೆಚ್ಚಿನ ಹಾನಿ ತಪ್ಪಿದೆ.
ಪಂಚಾಯಿತಿ ಸ್ಪಷ್ಟನೆ: ಘಟನೆ ಬಗ್ಗೆ ಪಂಚಾಯಿತಿ ವತಿಯಿಂದ ಸ್ಪಷ್ಟನೆ ನೀಡಲಾಗಿದ್ದು, ಭಾನುವಾರ ರಜೆಯ ಹಿನ್ನೆಲೆಯಲ್ಲಿ ಕಸ ವಿಲೇವಾರಿ ಮಾಡುವವರು ಬೆಳಗ್ಗೆ 11 ಗಂಟೆ ಸಮಯದಲ್ಲಿ ಕಸವನ್ನು ಘಟಕದಲ್ಲಿ ಸುರಿದು ಗೇಟಿಗೆ ಬೀಗ ಹಾಕಿ ಬಂದಿದ್ದಾರೆ. ಆ ನಂತರ ಯಾರೂ ಘಟಕಕ್ಕೆ ಹೋಗಿಲ್ಲ. ಸಂಜೆ ನಾಲ್ಕು ಗಂಟೆ ವೇಳೆಗೆ ಕಸದ ರಾಶಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಗ ಹೋಗಿ ಪರಿಶೀಲಿಸಿದಾಗ ಗೇಟಿನ ಬೀಗ ಒಡೆದಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಕಿ ಹಾಕುವಲ್ಲಿ ಹೊರಗಿನವರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಹಿರಿಯ ಅಧಿಕಾರಿಗಳ ಆದೇಶದಂತೆ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿ ಬೆಂಕಿಗೆ ಕಾರಣರಾದವರ ಪತ್ತೆಗೆ ಆಗ್ರಹಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.