ಲಕ್ಕಿ ಸ್ಕೀಮ್ ಹೆಸರಲ್ಲಿ 10 ಕೋಟಿ ರೂ. ಪಂಗನಾಮ *ನ್ಯೂ ಇಂಡಿಯಾ ರಾಯಲ್ ಸ್ಕೀಮ್‌ಗೆ ಹಣ ಕಟ್ಟಿ ಮೋಸ ಹೋದ ನೂರಾರು ಜನ

Fruad
Published on

ಮಂಗಳೂರು: ಸುರತ್ಕಲ್, ಕಾಟಿಪಳ್ಳ ಗ್ರಾಮದ ಬಿ.ಎಂ.ಆರ್. ಕಟ್ಟಡದಲ್ಲಿ ನ್ಯೂ ಇಂಡಿಯಾ ರಾಯಲ್ ಸ್ಕೀಮ್ ಎಂಬ ಹೆಸರಿನ ಲಕ್ಕಿ ಸ್ಕೀಮ್ ಪ್ರಾರಂಭಿಸಿ, 10 ಸಾವಿರಕ್ಕಿಂತಲೂ ಅಧಿಕ ಗ್ರಾಹಕರಿಂದ 10 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು ಈ ಸ್ಕೀಮ್‌ನ ಹ್ಯಾಂಡ್‌ಬಿಲ್ ನೋಡಿ ಜುಲೈ 2024ರಲ್ಲಿ ಆರೋಪಿಗಳ ಕಚೇರಿಗೆ ಭೇಟಿ ನೀಡಿ, ಹನೀಫ್ ಎಂಬುವರಲ್ಲಿ ಮಾತನಾಡಿದ್ದರು. ನೀವು ನ್ಯೂ ಇಂಡಿಯಾ ರಾಯಲ್ ಸ್ಕೀಮ್‌ನ ಸದಸ್ಯರಾಗಿ ತಿಂಗಳಿಗೆ 1000 ರೂ.ನಂತೆ 10 ತಿಂಗಳಲ್ಲಿ 10,000 ರೂ. ಪಾವತಿಸಿದಲ್ಲಿ ಸ್ಕೀಮ್ ಕೊನೆಗೊಂಡ ಬಳಿಕ 12,000 ರೂ. ನಗದಾಗಿ ನೀಡುತ್ತೇವೆ. ಈ ಮಧ್ಯೆ ಕೆಲವು ಆಕರ್ಷಕ ಬಹುಮಾನಗಳು, ಬಂಪರ್ ಬಹುಮಾನ ಕಾರು, ಬೈಕ್, ಚಿನ್ನದ ಉಂಗುರಗಳು ಸಹ ಈ ಲಕ್ಕಿ ಸ್ಕೀಮ್‌ನಲ್ಲಿ ಇರುವುದಾಗಿ ದೂರುದಾರರಿಗೆ ಆಸೆ ಹುಟ್ಟಿಸಿದ್ದರು. ಪರಿಣಾಮ ನ್ಯೂ ಇಂಡಿಯಾ ರಾಯಲ್ ಸ್ಕೀಮ್‌ಗೆ ಸದಸ್ಯರಾಗಿ ಪ್ರಥಮ ಕಂತಾಗಿ 1,000 ರೂ. ಹಣ ನಗದು ರೂಪದಲ್ಲಿ ಪಾವತಿಸಿದ್ದಾರೆ. ಬಳಿಕ ಪ್ರತಿ ತಿಂಗಳು 1,000 ರೂ.ದಂತೆ ಗೂಗಲ್ ಪೇ ಮುಖೇನ ನ್ಯೂ ಇಂಡಿಯಾ ರಾಯಲ್ ಸ್ಕೀಮ್‌ನ ಕ್ಯೂ ಆರ್ ಕೋಡ್‌ಗೆ ಹಣ ಡೆಪಾಸಿಟ್ ಮಾಡಿದ್ದಾರೆ. ಕೊನೆಯದಾಗಿ 2025 ಏಪ್ರಿಲ್ 21ರಂದು ಕಂತನ್ನು ಪಾವತಿಸಿದ್ದಾರೆ. ಈ ನ್ಯೂ ಇಂಡಿಯಾ ರಾಯಲ್ ಸ್ಕೀಮ್‌ನಲ್ಲಿ ಸುಮಾರು 10,000ಕ್ಕಿಂತಲೂ ಹೆಚ್ಚು ಸದಸ್ಯರಿಂದ ಹಣ ಡೆಪಾಸಿಟ್ ಮಾಡಿಸಿಕೊಂಡು ಕೊಟ್ಯಾಂತರ ರೂ. ಯಾವುದೇ ಲೈಸನ್ಸ್ ಪಡೆಯದೆ ಸಂಗ್ರಹ ಮಾಡಿದ್ದಾರೆ.

ಸ್ಕೀಮ್‌ನ ಕಂತು ಮುಗಿದ ನಂತರ ಡೆಪಾಸಿಟ್ ಮಾಡಿದ ಹಣ ಅಥವಾ ಅದಕ್ಕೆ ಸರಿಯಾದ ಬಹುಮಾನ ನೀಡುವಂತೆ ಕೇಳಿದಾಗ ಅವರು ನಾವು ಎಲ್ಲರಿಗೂ ಹಣವನ್ನು ಆದಷ್ಟು ಶೀಘ್ರದಲ್ಲಿ ಕೊಡುತ್ತೇವೆ. ಅದೆಲ್ಲವೂ ಪ್ರೋಸೆಸ್‌ನಲ್ಲಿ ಇರುವುದಾಗಿ ತಿಳಿಸಿ ದಿನ ದೂಡುತ್ತಿದ್ದರು. 2 ತಿಂಗಳ ಹಿಂದೆ ಮೊಹಮ್ಮದ್ ಅಶ್ರಫ್ ತನ್ನ ಕಚೇರಿಯನ್ನು ಬಂದ್ ಮಾಡಿದ್ದಾನೆ. ನ್ಯೂ ಇಂಡಿಯಾ ರಾಯಲ್ ಸ್ಕೀಮ್‌ನ ಮಾಲೀಕ ಎಂ.ಮಹಮ್ಮದ್ ಅಶ್ರಫ್ ಮತ್ತು ಮ್ಯಾನೇಜರ್ ಹನೀಫ್ ದೂರುದಾರರನ್ನು ಹಾಗೂ ಇತರರನ್ನು ಲಕ್ಕಿ ಸ್ಕೀಮ್ ಹೆಸರಿನಲ್ಲಿ ನಂಬಿಸಿ ಹಣ ಡೆಪಾಸಿಟ್ ರೂಪದಲ್ಲಿ ಕಟ್ಟಿಸಿಕೊಂಡು ವಿವಿಧ ರೀತಿಯ ಬಹುಮಾನನೀಡುವುದಾಗಿ ಆಸೆ ಹುಟ್ಟಿಸಿ ಕಟ್ಟಿದ ಹಣ ವಾಪಸ್ ನೀಡದೆ ವಂಚಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net